ಡಿವಿಜಿ ಸುದ್ದಿ, ದಾವಣಗೆರೆ: ಹಿರಿಯ ರಾಜಕಾರಣಿ, ಮಾಜಿ ಶಾಸಕ ಕೆ.ಮಲ್ಲಪ್ಪ (92) ಸೋಮವಾರ ಮುಂಜಾನೆ ದಾವಣಗೆರೆಯಲ್ಲಿ ನಿಧನರಾಗಿದ್ದಾರೆ.
ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆ ಮಲ್ಲಪ್ಪ, ದಾವಣಗೆರೆ ನಗರದ ಆಂಜನೇಯ ಬಡಾವಣೆಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಸಂಜೆ 4.30ಕ್ಕೆ ದಾವಣಗೆರೆ ಹಿಂದು ರುದ್ರಭೂಮಿಯಲ್ಲಿ ನೆರವೇರಲಿದೆ.
ಕೆ.ಮಲ್ಲಪ್ಪನವರ ಪರಿಚಯ
15-04-1929ರಲ್ಲಿ ಜನಿಸಿದ ಕೆ ಮಲ್ಲಪ್ಪ, ಮುಂದೆ ಜನಸೇವೆಯಲ್ಲಿ ನಿರತರಾಗಿ ರಾಜಕೀಯ ಪ್ರವೇಶ ಪಡೆದಿದ್ದರು, ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದಿಂದ 1983ರಲ್ಲಿ, ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ 1985ರಲ್ಲಿ ಶಾಸಕರಾಗಿ ಹಾಗೂ ಒಂದು ಭಾರೀ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ದೇವರಾಜ್ ಅರಸ್ ಹಿಂದುಳಿದ ವರ್ಗಗಳ ನಿಗಮ ಹಾಗೂ ಬಯಲು ಸೀಮೆಯ ಅಧ್ಯಕ್ಷರಾಗಿ ನಿರಂತರವಾಗಿ ಜನಸೇವೆಯಲ್ಲಿ ತೊಡಗಿದ್ದವರು.
ಕಾಗಿನೆಲೆ ಮಹಾಸಂಸ್ಥಾನ ಪೀಠ ನಿರ್ಮಾಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾಗಿ ಪೀಠ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾಗಿ, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಅಂದೇ ಕುರುಬ ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು ಎಂದು ಹೋರಾಟ ಮಾಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತರಾಗಿದ್ದ ಕೆ.ಮಲ್ಲಪ್ಪ, ಅಹಿಂದಾ ಸಂಘಟನೆಯ ಪ್ರಮುಖ ರೂವಾರಿಗಳಾಗಿದ್ದರು, ವಿವಿಧ ಶೋಷಿತ ಅಹಿಂದ ವರ್ಗಗಳಿಗೆ ಮಾರ್ಗದರ್ಶಕರಾಗಿದ್ದರು.
ಅಷ್ಟೆ ಅಲ್ಲದೇ ಕುಸ್ತಿ ಜೀರ್ಣೋದ್ಧಾರಕ ಸಂಘದ ಅಧ್ಯಕ್ಷರಾಗಿ ಹೆಸರುವಾಸಿ ಆಗಿದ್ದ ಮಲ್ಲಪ್ಪನವರು, ನೂರಾರು ಕ್ರೀಡಾಪಟುಗಳನ್ನು ಬೆಳೆಸಿದ್ದವರು. ನನ್ನಂತಹ ಶೋಷಿತ ವರ್ಗದವನಿಗೆ ಸದಾ ಬೆನ್ನು ತಟ್ಟುತ್ತಿದ್ದ ಕೆ.ಮಲ್ಲಪ್ಪನವರನ್ನ ಕಳೆದುಕೊಂಡಿದ್ದು ನಮ್ಮಂತಹ ಹೋರಾಟಗಾರರಿಗೆ ಬೆನ್ನೆಲಬು ಇಲ್ಲದಂತಾಗಿದೆ ಎಂದು ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಸಂತಾಪ ಸೂಚಿಸಿದ್ದಾರೆ.