ದಾವಣಗೆರೆ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಾವಣಗೆರೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ (ಚನ್ನಗಿರಿ ತಾಲ್ಲೂಕು ಹೊರತುಪಡಿಸಿ) ಕಾಮಗಾರಿಗಳ ಮೇಲು ಉಸ್ತುವಾರಿ ಬಿಎಫ್ ಟಿ (ಬೇರ್ ಫೂಟ್ ಟೆಕ್ನೀಷಿಯನ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮ ಪಂಚಾಯಿತಿ ಕೈಗೊಳ್ಳಬಹುದಾದ ಕಾಮಗಾರಿಗಳನ್ನು ಗುರುತಿಸಲು, ತಾಂತ್ರಿಕ ಸಹಾಯಕರಿಗೆ ಸಹಾಯ ಮಾಡುವುದು, ಗ್ರಾಮಸಭೆ ಮಂಡಿಸುವುದು ಹಾಗೂ ಯೋಜನೆಯಡಿ ನಿರ್ವಹಿಸುವ ಎಲ್ಲಾ ಕಾಮಗಾರಿಗಳ ಮೇಲು ಉಸ್ತುವಾರಿ ನೋಡಿಕೊಳ್ಳುವುದು ಬಿಎಫ್ ಟಿ ಗುರಿಯಾಗಿದೆ. ಸ್ಕ್ರೀನಿಂಗ್ ಟೆಸ್ಟ್ ಮೂಲಕ ಮಾಸಿಕ ಗೌರವಧನ ಪಾವತಿಸಲಾಗುವುದು.
ಅರ್ಜಿ ಸಲ್ಲಿಸಲು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಕಡ್ಡಾಯವಾಗಿ ಉದ್ಯೋಗ ಚೀಟಿ ಹೊಂದಿರಬೇಕು. 45 ವರ್ಷದ ವಯೋಮಿತಿಯೊಳಗಿರಬೇಕು. ಕಳೆದ ಮೂರು ಆರ್ಥಿಕ ವರ್ಷಗಳ ಅವಧಿಯಲ್ಲಿ ಕನಿಷ್ಠ 2 ವರ್ಷಗಳಿಂದ ಯೋಜನೆಯಡಿ 25 ದಿನಗಳಿಗೆ ಕಡಿಮೆ ಇಲ್ಲದಷ್ಟು ಉದ್ಯೋಗ ನಿರ್ವಹಿಸಿರಬೇಕು. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಬಿ.ಎಫ್.ಟಿ. ಹುದ್ದೆಗಾಗಿ ಅರ್ಜಿ ಸಲ್ಲಿಸಲು ಇಚ್ಚಿಸುವವರು ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯತಿಗಳಲ್ಲಿ ಕಚೇರಿ ಅವಧಿಯಲ್ಲಿ ಅರ್ಜಿ ಪಡೆದು ನಿಗದಿಪಡಿಸಿದ ದಾಖಲೆಗಳೊಂದಿಗೆ ಏ.07 ರೊಳಗೆ ಸೀಲ್ ಮಾಡಿದ ಲಕೋಟೆಯಲ್ಲಿ ಮುದ್ದಾಂ ಅರ್ಜಿ ಪಡೆದ ತಾಲ್ಲೂಕು ಪಂಚಾಯಿತಿ ಕಚೇರಿಯ ನರೇಗಾ ಶಾಖೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್‍ನ ಉಚಿತ ಸಹಾಯವಾಣಿ 1800 425 2203 ಕರೆ ಮಾಡಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.