ದಾವಣಗೆರೆ: ಸ್ವಚ್ಛಂದವಾದ ಪರಿಸರದಲ್ಲಿ ಅಕ್ಷರ ಕಲಿಯಬೇಕಾದ ಶಾಲಾ ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದ ಮದ್ಯ ಬಾಟಲಿ ಕಂಡ ದಾವಣಗೆರೆ ಯುವ ಬ್ರಿಗೇಡ್ ಕಾರ್ಯಕರ್ತರು ತೆರವುಗೊಳಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಇದರ ಜತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಯುವ ಬ್ರಿಗೇಡ್ ನ ಈ ಕಾರ್ಯ ಶ್ಲಾಘನೀಯವಾಗಿದೆ.
ಶಾಲೆ ಆವರಣದಲ್ಲಿ ಇಂತಹ ದೃಶ್ಯ ನೋಡಿದರೆ ಜವಾಬ್ದಾರಿಯುತ ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಭವಿಷ್ಯದ ಉತ್ತಮ ಪ್ರಜೆಯಾಗಿ ಮಕ್ಕಳು ರೂಪುಗೊಳ್ಳಲು ಶಾಲೆ ಸುತ್ತಮುತ್ತಲಿನ ಪರಿಸರವು ಕೂಡ ಪೂರಕವಾಗಿರುತ್ತೆ. ಆದರೆ, ದಾವಣಗೆರೆ ತಾಲ್ಲೂಕಿನ ‘ಜರೇಕಟ್ಟೆ’ ಗ್ರಾಮದ ಸರ್ಕಾರಿ ಅನುದಾನಿತ ‘ಶ್ರೀ ಆಂಜನೇಯಸ್ವಾಮಿ ವಸತಿ ಪ್ರೌಢಶಾಲೆ’ ಆವರಣದಲ್ಲಿ ಎಲ್ಲೆಂದರಲ್ಲಿ ಮದ್ಯ ಬಾಟಲಿ ಸಿಗುತ್ತವೆ. ಇಂತಹ ಪರಿಸ್ಥತಿ ನಿರ್ಮಾಣಕ್ಕೆ ಕುಡುಕರು ಮಾತ್ರ ಕಾರಣ ಅಲ್ಲ, ಗ್ರಾಮದ ನಾಗರಿಕರು ಸಹ ಕಾರಣಾಗಿದ್ದಾರೆ. ಎಸ್ ಡಿಎಂಸಿ ಸದಸ್ಯರಿಗೆ ಈ ಶಾಲೆಯ ವಾತಾವರಣದಲ್ಲಿನ ಈ ಪರಿಸ್ಥಿತಿ ಕಂಡಿಲ್ಲವೇ…? ಅಥವಾ ಕಂಡಿದ್ದರೂ ಮೌನವಾಗಿದ್ರಾ..? ಎಂಬ ಪ್ರಶ್ನೆ ಕಾಡುತ್ತದೆ. ಇತ್ತ ಕಡೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ.
ಶಾಲೆ ಆವರಣದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಕುಡಿದು ಬಾಟಲಿ ಬಿಸಾಕಿ ಹೋಗಿದ್ದಾರೆ. ಅವು ಒಡೆದು ಮಕ್ಕಳ ಕಾಲಿಗೆ ಚುಚ್ಚಿತ್ತಿವೆ. ಹೀಗಾಗಿ ಬ್ರಿಗೇಡ್ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ 1000 ಕ್ಕೂ ಹೆಚ್ಚು ಮದ್ಯದ ಬಾಟಲಿಗಳನ್ನು ವಿಲೇವಾರಿ ಮಾಡಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ, ಶಾಲೆಯ ಎಸ್ ಡಿಎಂಸಿ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಗಮನಹರಿಸಬೇಕಿದೆ.



