ದಾವಣಗೆರೆ: ದಾವಣಗೆರೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಜಲಸಿರಿ ಕಾಮಗಾರಿಯನ್ನು ಜೂನ್ 2022 ಕ್ಕೆ ಪೂರ್ಣಗೊಳಿಸಿ ನಗರದ ಜನತೆಗೆ 24*7 ಕುಡಿಯುವ ನೀರನ್ನು ಸರಬರಾಜು ಮಾಡಲೇಬೇಕು, ಇಲ್ಲದಿದ್ದ ಪಕ್ಷದಲ್ಲಿ ಕಂಟ್ರಾಕ್ಟರ್ ಹಾಗೂ ಅಧಿಕಾರಿಗಳೇ ಇದರ ಹೊಣೆ ಹೊರಬೇಕಾಗುತ್ತದೆಂದು ಸಂಸದರಾದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಸ್ಮಾರ್ಟ್ ಸಿಟಿ ಕಛೇರಿಯಲ್ಲಿ ಗುರುವಾರ ನಡೆದ ಜಲಸಿರಿ, ಸ್ಮಾರ್ಟ್ ಸಿಟಿ, ಏರ್ ಪೋರ್ಟ್‍ಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತಾನಾಡಿದ ಅವರು ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಕಂಟ್ಟ್ರಾಕರ್‍ಗಳು ಈ ಹಿಂದೆ ನಡೆದ ಸಭೆಯಲ್ಲಿ 2022ರ ಜನವರಿ ತಿಂಗಳಿಗೆ ಜಲಸಿರಿ ಕಾಮಗಾರಿ ಪೂರ್ಣಗೊಳಿಸಿ ನೀರು ಒದಗಿಸುವುದಾಗಿ ವಾಗ್ದಾನ ಮಾಡಿದ್ದಿರಿ. ಆದರೆ ಸಬೂಬುಗಳನ್ನು ಹೇಳಿ ಮತ್ತೇ ಆರು ತಿಂಗಳು ಕಾಲಾವಕಾಶ ಕೇಳುತ್ತಿದ್ದೀರಿ.ಯಾವುದೇ ಕಾರಣಕ್ಕೂ ಜೂನ್ 2022ಕ್ಕೆ ನೀರು ಸರಬರಾಜು ಆಗಲೇ ಬೇಕು. ಇನ್ನು ಮುಂದೆ ನಾನೇ ಖುದ್ದಾಗಿ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. 2017 ರಲ್ಲಿ ಆರಂಭವಾದ ಯೋಜನೆ 4 ವರ್ಷವಾದರೂ ಮುಗಿದಿಲ್ಲವೆಂದರೆ ತಾವು ಏನು ಕೆಲಸ ಮಾಡುತ್ತೀದ್ದೀರಿ ಕೊರೋನಾ ಕಾರಣದಿಂದ 9 ತಿಂಗಳು ಕಾರ್ಯಸ್ಥಗಿತವಾಗಿದ್ದುದು ಬಿಟ್ಟರೆ ಅಭಿವೃದ್ದಿ ಕಾಮಗಾರಿಗಳಿಗೆ ಯಾವುದೇ ಅಡಚಣೆಯಾಗಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಹಗಲು ರಾತ್ರಿ ಪಾಳಿಗಳಲ್ಲಿ ಕಾರ್ಯನಿರ್ವಹಿಸಿ ಬೇಗನೆ ಸಾರ್ವಜನಿಕರಿಗೆ ನೀರು ಕೊಡುವ ಕೆಲಸ ಮಾಡಿ ಎಂದರು.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ರವೀಂದ್ರ ಮಲ್ಲಾಪುರ ಮಾಹಿತಿ ನೀಡಿ ಒಟ್ಟು ರೂ.668 ಕೋಟಿ ವೆಚ್ಚದ ಪೈಕಿ ರೂ.296.37 ಕೋಟಿಗಳನ್ನು ಏಜೆನ್ಸಿಗೆ ನೀಡಲಾಗಿದೆ. ಕೆಲ ಕಾಮಗಾರಿಗಳು ಶೇ.75 ರಷ್ಟು ಮುಗಿದಿದ್ದು, ಕಾಮಗಾರಿ ವಿಳಂಬ ಮಾಡಿದವರಿಗೆ ಈಗಾಗಲೇ ಎರಡು ಮೂರು ಬಾರಿ ಪೆನಾಲ್ಟಿ ಹಾಕಲಾಗಿದೆ. ಹಾಗೂ ಓವರ್ ಹೆಡ್ ಟ್ಯಾಂಕ್‍ಗಳ ಕಾಮಗಾರಿಯೂ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಅದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಹಾಗೂ ಜಾಕ್ ವೆಲ್ ಬಳಿ ಜಾಗ ಸಿಗುವುದು ತಡವಾದ್ದರಿಂದ ಸ್ವಲ್ಪ ವಿಳಂಬವಾಗಿದೆ ಮತ್ತು ನಲ್ಲಿ ಹಾಗೂ ಪೈಪ್‍ಲೈನ್ ಕಾಮಗಾರಿ ಎರಡು ತಿಂಗಳಲ್ಲಿ ಮುಗಿಯಲಿವೆ ಎಂದರು.
ಸೂಯಜ್ ಕಂಪನಿಯ ಸುಚಿತ್ ಮಾಹಿತಿ ನೀಡಿ ನಗರವನ್ನು 50 ಭಾಗಗಳನ್ನಾಗಿ ವಿಂಗಡಿಸಿಕೊಂಡಿದ್ದು ಕಾಮಗಾರಿಗಳು ಸಾಗುತ್ತಿವೆ. ರಾತ್ರಿವೇಳೆಯಲ್ಲಿ ಕಾರ್ಯನಿರ್ವಹಿಸಲು ಕೆಲ ಅಡೆತಡೆಗಳಿರುವುರುವುದರಿಂದ ಬೆಳಗ್ಗಿನ ಅವಧಿಯಲ್ಲಿ ಮಾತ್ರ ಕೆಲಸ ಮಾಡಲಾಗುತ್ತಿದೆ ಎಂದಾಗ ಎಸ್.ಪಿ ರಿಷ್ಯಂತ್ ಅವರು ಮಾತಾನಾಡಿ ಬೆಂಗಳೂರಿನಂತಹ ನಗರಗಳಲ್ಲಿ ರಾತ್ರಿ ಹೊತ್ತು ಕೆಲಸ ನಿರ್ವಹಿಸುತ್ತಾರೆ. ನಮ್ಮಲ್ಲಿ ಏಕೆ ಆಗುವುದಿಲ್ಲ. ಎಂದಾಗ ಜಿಲ್ಲಾಧಿಕಾರಿಗಳು ನಮ್ಮ ಕಡೆಯಿಂದ ಯಾವುದಾದರೂ ಸಹಾಯ ಬೇಕಿದ್ದರೆ ಕೇಳಿ ನಿಮಗೆ ಎಲ ್ಲರೀತಿಯ ಪ್ರೋತ್ಸಾಹ ನೀಡಲಾಗುವುದು. ಒಟ್ಟಾರೆ ನಿಗದಿತ ಅವಧಿಯಲ್ಲಿ ಜಲಸಿರಿಯ ನೀರು ಸಾರ್ವಜನಿಕರಿಗೆ ಸಿಗುವಂತೆ ಕಾರ್ಯನಿರ್ವಹಿಸಿ ಎಂದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳು ಡಿ.31ಕ್ಕೆ ಪೂರ್ಣವಾಗಬೇಕು: ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿಪರಿಶೀಲನೆ ನಡೆಸಿದ ಸಂಸದರು ಡಿ.31, 2022ಕ್ಕೆ ಸ್ಮಾರ್ಟ್ ಸಿಟಿಯ ಕಾಮಗಾರಿಗಳು ಪೂರ್ಣಗೊಳ್ಳಬೇಕು. ತುಂಗಾಭದ್ರ ನದಿಯ ಮಾಕನೂರು ಹಾಗೂ ರಾಜನಹಳ್ಳಿ ಬಳಿಯ ಕಾಮಗಾರಿಗಳು ಈ ವೇಳೆಗೆ ಪೂರ್ಣಗೊಂಡಿದ್ದರೆ ಜಲಸಿರಿ ಯೋಜನೆಯನ್ನು ನಗರದ ಜನತೆಗೆ ನೀಡಬಹುದಿತ್ತು. ಅಕಾಲಿಕ ಮಳೆಯ ಕಾರಣ ನೀಡುತ್ತಿದ್ದೀರಿ ಟೆಂಡರ್ ಹಾಕುವಾಗ ಈ ಎಲ್ಲ ಅಡೆತಡೆಗಳು ತಮಗೆ ತಿಳಿದಿರಲ್ಲಿಲವೇ ಕೋವಿಡ್ ಕಾಲದಲ್ಲಿಯೂ ಯಾವುದೇ ಕಾಮಗಾರಿ ನಿಂತಿಲ್ಲ. ಕಾರ್ಮಿಕರ ಕೊರತೆ ಆಗಿಲ್ಲ. ಹಾಗಾಗಿ ಬೇಗನೆ ಉಳಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹನ್ನೊಂದು ತಿಂಗಳಲ್ಲಿ ಚುನಾವಣೆ ಬರುತ್ತದೆ ನಾವು ಜನರಿಗೆ ಏನು ಉತ್ತರ ಕೊಡುವುದು, ಕೆಲ ಕಾಮಗಾರಿಗಳಲ್ಲಿ ಅತ್ಯಂತ ಕಡಿಮೆ ದರಕ್ಕೆ ಟೆಂಡರ್ ಹಾಕಿದ್ದೀರಿ, ಈಗ ಕಾಮಗಾರಿ ಮುಗಿಸಲು ಕಾರಣಗಳನ್ನು ಹೇಳುತ್ತಿದ್ದೀರಿ ಯಾವುದಾರೂ ಕಾಮಗಾರಿ ಕಳಪೆ ಆಗಿದ್ದರೆ ಕೂಡಲೇ ಸರಿಪಡಿಸಿ ಎಂದರು. ಸ್ಮಾರ್ಟ್ ಸಿಟಿ ಅಡಿ ಇಕೋ ಸೈಕಲ್ ಸ್ಟಾಂಡ್ ಗಳನ್ನು ನಿರ್ಮಿಸಲಾಗಿದೆ ಆದರೆ ಸೈಕಲ್ಗಳ ಬಳಕೆ ಆಗುತ್ತಿಲ್ಲ ಅವುಗಳ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಮತ್ತು ಎರಡೂವರೆ ಕೋಟಿ ಆಗುವಂತಹ ಈ ಟೆಂಡರ್‍ಗೆ ಹತ್ತು ಕೋಟಿ ನೀಡಿದ್ದಿರಿ. ಇದರ ಬಗೆಗೆ ಸರಿಯಾದ ಮಾಹಿತಿ ತರಿಸಿಕೊಂಡು ನೀಡಬೇಕು. ಹಾಗೂ ಸಿ.ಜಿ ಆಸ್ಪತ್ರೆಯ ಟ್ರಾಮಕೇರ್ ಸೆಂಟರ್ ಕಾಮಗಾರಿ ಶೇ.10ರಷ್ಟು ಆಗಿದ್ದು ಶೆ.90 ರಷ್ಟು ಕಾಮಗಾರಿ ಬಾಕಿ ಇದೆ. ಇದರೊಂದಿಗೆ ಕುಂದುವಾಡ ಕೆರೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿ ಎಂದರು.
ಜಿಲ್ಲೆಗೆ ಏರ್‍ಪೋರ್ಟ್: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತಾನಾಡಿ ಜಿಲ್ಲೆಯ ಜನರ ಬಹುದಿನದ ಕನಸಾಗಿದ್ದ ಏರ್ ಪೋರ್ಟ್ ಸಂಬಂಧ ವಿಮಾನ ಯಾನ ಸಚಿವಾಲಯದಿಂದ ಕೆಲ ಮಾಹಿತಿ ಕೇಳಿ ಸಂಸದರಿಗೆ ಪತ್ರ ಬರೆದಿದ್ದಾರೆ. ಹಾಗಾಗಿ ಸಂಬಂಧಿಸಿದ ಇಲಾಖೆಗಳು ಅಗತ್ಯ ಮಾಹಿತಿಯನ್ನು ತ್ವರಿತವಾಗಿ ನೀಡಬೇಕು. ಈ ಹಿಂದೆ 2010ರಲ್ಲಿ ಆನಗೋಡು, ಹುಳುಪಿನಕಟ್ಟೆ, ಹಾಲುವರ್ತಿ ಭಾಗದಲ್ಲಿ 338 ಎಕರೆ ಜಾಗ ಗುರುತಿಸಿ ಕೊಡಲಾಗಿದೆ. ಏರ್ ಪೋರ್ಟ್ ನಿರ್ಮಿಸಲು 270 ಎಕರೆ ಜಾಗ ಸಾಕಗುತ್ತದೆ. ಮತ್ತೊಮ್ಮೆ ಏನಾದರೂ ಫೀಸಿಬಲ್ ಸರ್ವೆ ಮಾಡುವುದಾದರೆ 23 ಲಕ್ಷ ಹಣ ತುಂಬಾ ಬೇಕಾಗುತ್ತದೆ ಎಂದರು. ಸಂಸದರು ಪ್ರತಿಕ್ರಿಯಿಸಿ ಸಂಬಂಧಿಸಿದ ಇಲಾಖೆಗಳು ಬೇಗನೆ ವರದಿಕೊಡಿ ಹಣ ತುಂಬೋಣ ಎಂದರು.
ಸಭೆಯಲ್ಲಿ ಜಿ.ಪಂ ಸಿಇಓ ಮಹಾಂತೇಶ್ ದಾನಮ್ಮನವರ್, ಉಪ ವಿಭಾಗಾಧಿಕಾರಿ ಮಮತ ಹೊಸಗೌಡರ, ದೂಡ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಆಯುಕ್ತ ಕುಮಾರಸ್ವಾಮಿ, ಸ್ಮಾರ್ಟ್‍ಸಿಟಿ ಇಂಜಿನಿಯರ್‍ಗಳು ಉಪಸ್ಥಿತರಿದ್ದರು.