ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಗೆ ಶಾಕ್ ಎದುರಾಗಿದೆ. ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಹೆಚ್. ಪಿ. ರಾಜೇಶ್, ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇಂದು (ಮಾ.14) ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ, ಮಾಜಿ ಸಚಿವ ಸಿ. ಟಿ. ರವಿ, ಜಗಳೂರು ಮಾಜಿ ಶಾಸಕ ಎಸ್. ವಿ. ರಾಮಚಂದ್ರಪ್ಪ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದರು.
ಬಿಜೆಪಿ ಸೇರ್ಪಡೆ ನಂತರ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲು ಕಾಂಗ್ರೆಸ್ ಪಕ್ಷವು ಕೊನೆಯವರೆಗೂ ಟಿಕೆಟ್ ನೀಡದೇ ಮೋಸ ಮಾಡಿತು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ತೀವ್ರ ಪೈಪೋಟಿ ನೀಡಿದ್ದೆ. ಕ್ಷೇತ್ರದ ಜನರು ತುಂಬಾನೇ ಪ್ರೀತಿ ಕೊಟ್ಟಿದ್ದಾರೆ. ಮತವನ್ನೂ ಹಾಕಿದ್ದಾರೆ. ಈ ಋಣ ಮರೆಯಲಾಗದು ಎಂದು ಕಾಂಗ್ರೆಸ್ ಪಕ್ಷದಲ್ಲಿ ಆದ ನೋವು ತೋಡಿಕೊಂಡರು. ಈ ಮೊದಲು ನಾನು ಬಿಜೆಪಿಯಲ್ಲಿದ್ದೆ. ಮತ್ತೆ ಮನೆಗೆ ಬಂದಷ್ಟೇ ಖುಷಿಯಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಅಲ್ಪ ಮತದಿಂದ ಸೋಲು ಕಂಡಿದ್ದ ಹೆಚ್. ಪಿ. ರಾಜೇಶ್ ಅವರು, ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದರು. ಬಿಜೆಪಿ ಸೇರುವ ಒಲವು ಹೊಂದಿದ್ದರು.ಈಗ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.



