ಜಗಳೂರು: ಪಟ್ಟಣದಲ್ಲಿ ಹಾದುಹೋಗಿರುವ ಮಲ್ಪೆ, ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಅತಿಕ್ರಮಣವಾಗಿದ್ದು, ಕಾನೂನಿನ ಪ್ರಕಾರ ರಸ್ತೆ ವಿಸ್ತರಣೆ ಮಾಡಿ ಸಿದ್ಧ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪ್ರವಾಸಿ ಮಂದಿರದಲ್ಲಿ ವರ್ತಕರ ಜೊತೆ ಸಭೆ ನಡೆಸಿದ ನಂತರ ಮಾತನಾಡಿ, ಪಟ್ಟಣ ಅಭಿವೃದ್ಧಿ ವಿಚಾರವಾಗಿ ನನ್ನ ಕತ್ತು ಕುಯ್ದರೂ ಸರಿ, ನಾನು ರಸ್ತೆ ವಿಸ್ತರಣೆ ಮಾಡಿಯೇ ಸಿದ್ಧ ಎಂದರು.
ಹೈಕೋರ್ಟ್ ಮೆಟ್ಟಿಲೇರಿದ ವರ್ತಕರು
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ವೃತ್ತದವರೆಗೆ ರಸ್ತೆ ವಿಸ್ತರಣೆಗೆ 20 ಕೋಟಿ ಅನುದಾನ ಬಂದಿದೆ. 63 ವರ್ತಕರು ರಸ್ತೆ ವಿಸ್ತರಣೆ ಮಾಡದಂತೆ ಹಾಗೂ ಪರಿಹಾರಕ್ಕೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದರು.
69 ಅಡಿ ರಸ್ತೆ ವಿಸ್ತರಣೆ
ಸಾಕಷ್ಟು ಸಭೆಗ ನಡೆಸಿ ರಸ್ತೆ ವಿಸ್ತರಣೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ರಸ್ತೆ ಮಧ್ಯದಿಂದ ಎರಡೂ ಬದಿಯಲ್ಲಿ 69 ಅಡಿ ರಸ್ತೆ ವಿಸ್ತರಣೆಗೆ ಮಾರ್ಕಿಂಗ್ ಮಾಡಲಾಗಿದೆ. ಆದರೆ, ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಅಪಘಾತದಿಂದ ಕಳೆದ 6 ತಿಂಗಳ ಹಿಂದೆ 2 ಜೀವಗಳು ಬಲಿಯಾಗಿವೆ. ಆ ಜೀವಗಳನ್ನು ವಾಪಸ್ ತರಲು ಸಾಧ್ಯವೇ? ವರ್ತಕರು ಸಾರ್ವಜನಿಕ ಹಿತಾಸಕ್ತಿಯುಂದ ವಿಸ್ತರಣೆಗೆ ಸಹಕರಿಸಬೇಕು ಎಂದರು.
ಕಾನೂನು ರೀತಿ ಕ್ರಮ
ಭೂ ದಾಖಲೆ ಹೊಂದಿರುವ ವರ್ತಕರು ಪರಿಹಾರ ಕೇಳುತ್ತಿದ್ದಾರೆ. ಆದರೆ, ಅತಿಕ್ರಮಣ ಮಾಡಿಕೊಂಡವರು ಅಡ್ಡಿಪಡಿಸಿದರೆ, ಅಂಥವರ ವಿರುದ್ಧ ಹೇಗೆ ವರ್ತಿಸಬೇಕು ಎಂಬುದು ನನಗೆ ಗೊತ್ತು. ನನ್ನ ಪ್ರಾಣ ಹೋದರೂ ಅವರ ವಿರುದ್ಧ ಕ್ರಮ ಕಾನೂನು ರೀತಿ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ ಎಂದು ವರ್ತಕರು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಎಚ್ಚರಿಕೆ ಸಂದೇಶವನ್ನು ಶಾಸಕರು ರವಾನಿಸಿದರು.
ಶಾಲೆಗಳು ಮತ್ತು ಮಳೆಗಾಲ ಆರಂಭವಾಗುವ ಮೊದಲು ಹಗಲು-ರಾತ್ರಿ ರಸ್ತೆ ವಿಸ್ತರಣೆ ಕಾರ್ಯ ಮಾಡಬೇಕು ಎಂದು ಗುತ್ತಿಗೆದಾರ ಮತ್ತು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
69 ಅಡಿ ಬದಲು 50 ಅಡಿ ವಿಸ್ತರಣೆಗೆ ಮನವಿ
ನಿಯಮಗಳಂತೆ 69 ಅಡಿ ವಿಸ್ತರಣೆ ಮಾಡಿದರೆ ವರ್ತಕರು ಎಲ್ಲವನ್ನೂ ಬಿಟ್ಟು ಕೊಡಬೇಕಾಗುತ್ತದೆ. ಹೀಗಾಗಿ ಎಲ್ಲ ವರ್ತಕರ ಅಭಿಪ್ರಾಯ ಸಂಗ್ರಹಿಸಿದ್ದು, 69 ಅಡಿ ಬದಲಿಗೆ 50 ಅಡಿವರೆಗೆ ರಸ್ತಗೆ ವಿಸ್ತರಣೆಗೆ ನಾವೆಲ್ಲ ಬದ್ಧರಾಗಿ, ಜಾಗ ಬಿಟ್ಟುಕೊಡಲು ಸಿದ್ಧರಿದ್ದೇವೆ. ಅಷ್ಟೇ ಅಲ್ಲ ಯಾವುದೇ ಪರಿಹಾರವನ್ನೂ ಕೇಳದೇ ನಾವೇ ಜಾಗವನ್ನು ಜೆಸಿಬಿ ಮೂಲಕ ಸ್ವಯಂ ತೆರವುಗೊಳಿಸಿ ಅಭಿವೃದ್ಧಿಗೆ ಸಹಕಾರ ನೀಡಲು ಸಿದ್ಧ ಎಂದು ವರ್ತಕರ ಸಂಘದ ತಾಲೂಕು ಅಧ್ಯಕ್ಷ ದಾದಾ ಖಲಂದರ್ ತಿಳಿಸಿದ್ದಾರೆ.
ಪಿಡಬ್ಯ್ಲೂಡಿ ಎಇ ಪುರುಷೋತ್ತಮ ರೆಡ್ಡಿ ಹೈಕೋರ್ಟ್ ಆದೇಶದ ಪ್ರತಿಯಲ್ಲಿದ್ದ ಮಾಹಿತಿಯನ್ನು ಸಭೆ ಗಮನಕ್ಕೆ ತಂದರು. ಪ.ಪಂ. ಚೀಫ್ ಆಫೀಸರ್ ಲೋಕ್ಯಾನಾಯ್ಕ್, ವರ್ತಕರು ಅತಿಕ್ರಮಿಸಿಕೊಂಡ ಸರ್ಕಾರಿ ಜಾಗದ ಬಗ್ಗೆ ವಿವರಿಸಿದರು. ಮಾಜಿ ಜಿಪಂ ಸದಸ್ಯ ಕೆ.ಪಿ.ಪಾಲಯ್ಯ, ಮಧು, ಇದ್ದರು.