ದಾವಣಗೆರೆ; ಜಿಲ್ಲೆಯ ಜಗಳೂರು ದೊಡ್ಡ ಮಾರಮ್ಮನ ಜಾತ್ರೆ ಆಚರಣೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಏ.26 ರಂದು ಗಲಾಟೆ ನಡೆದಿದ್ದು, ಕಾರಿನಲ್ಲಿ ಹೋಗುತ್ತಿದ್ದವರ ಮೇಲೆ 20 ರಿಂದ 30 ಜನರ ಗುಂಪು ದಾಳಿ ಮಾಡಿದೆ. ಕಟ್ಟಿಗೆಯಿಂದ ಕಾರಿನ ಗಾಜುಗಳನ್ನು ಹೊಡೆದು ಜಖಂಗೊಳಿಸಿದ್ದಾರೆ. ಪ್ರಯಾಣಿಕರಿಂದ ಹಣ ಸುಲಿಗೆ ಮಾಡಿದ್ದರು. ಹೀಗಾಗಿ 16 ಜನ ಬಂಧಿಸಲಾಗಿತ್ತು. ಈ ಬಂಧನ ವಿರೋಧಿಸಿ ಗ್ರಾಮಸ್ಥರು ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದ್ದರಿಂದ ಲಘು ಲಾಠಿ ಪ್ರಹಾರ ನಡೆದಿದ್ದು, ಇಂದು ಬೆಳಗ್ಗೆ ಹೆಚ್ಚುವರಿ ಎಸ್ಪಿ ಅವರು ಶಾಂತಿ ಸಭೆ ನಡೆಸಿದ್ದಾರೆ. 16 ಜನರನ್ನು ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಅರುಣ್ ತಿಳಿಸಿದ್ದಾರೆ.
ಜಗಳೂರು ಠಾಣೆ ಮುಂಭಾಗ ಪೊಲೀಸರು ಮಹಿಳೆಯರು, ಮಕ್ಕಳ ಮೇಲೆ ಲಾಠಿ ಪ್ರಯೋಗ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು. ಸುಖಾಸುಮ್ಮನೆ ಮನೆಯ ಮಕ್ಕಳನ್ನು ಠಾಣೆಗೆ ಕರೆದುಕೊಂಡು ಬಂದಿದ್ದು, ಕೇಳಲು ಬಂದವರಿಗೆ ಲಾಠಿಯಿಂದ ಹೊಡೆದಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದರು.ಜಗಳೂರಿನಲ್ಲಿ ಐದು ವರ್ಷಕ್ಕೊಮ್ಮೆ ದೊಡ್ಡ ಮಾರಮ್ಮನ ಜಾತ್ರೆ ನಡೆಯುತ್ತದೆ. ಈ ಜಾತ್ರೆ ಆಚರಣೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಕೆಲವು ಕಿಡಿಗೇಡಿಗಳು ಬುಧವಾರ (ಏ.26) ರಾತ್ರಿ ವಾಹನಗಳ ಗ್ಲಾಸ್ ಪುಡಿ ಪುಡಿ ಮಾಡಿ ಹಾನಿ ಮಾಡಿದ್ದಾರೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಗ್ರಾಮದ 16 ಯುವಕರನ್ನು ಠಾಣೆಗೆ ಕರೆ ತಂದಿದ್ದರು.
ದಾವಣಗೆರೆ ಸಿದ್ದರಾಮೇಶ್ವರ ಬಡಾವಣೆಯ ವಕೀಲೆ ಮೋನಿಕಾ ಹಾಗೂ ಜಗಳೂರಿನ ಬಾಲಾಜಿ ಎಲೆಕ್ಟ್ರಿಕ್ ನ ಮದನಲಾಲ್ ಮತ್ತು ರಾಮಲಿಂಗೇಶ್ವರ ಸ್ವಾಮೀಜಿ ಕಾರುಗಳನ್ನು ತಡೆದು ಕಟ್ಟಿಗೆಗಳಿಂದ ಹೊಡೆದು ಜಖಂಗೊಳಿಸಿ ಆ ಎರಡು ಕಾರಿನಲ್ಲಿದ್ದವರ ಬಳಿ ಹೆದರಿಸಿ ಬಲವಂತವಾಗಿ ಹಣವನ್ನು ಕಿತ್ತುಕೊಂಡು ಹೋಗಿದ್ದರು ಎಂದು ನೀಡಿದ ದೂರಿನ ಮೇರೆಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.