ದಾವಣಗೆರೆ: ದಾವಣಗೆರೆಯನ್ನು ಸುಂದರ, ಪರಿಸರಸ್ನೇಹಿ, ಜನಸ್ನೇಹಿ ನಗರವನ್ನಾಗಿ ಮಾಡಲು ಕ್ರಮ ವಹಿಸಲಾಗುವುದು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರಿಗೆ ಆರ್ಥಿಕ ಶಕ್ತಿ ತುಂಬಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಉದ್ಘಾಟಿಸಿಮಾತನಾಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಜನರಿಗ ಕಡಿಮೆ ದರದಲ್ಲಿ ಮರಳು ಸಿಗುವಂತೆ ಮಾಡಲಾಗುವುದು. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ದಾವಣಗೆರೆ ವಿಭಾಗದಿಂದ ಜುಲೈ ತಿಂಗಳ ಅಂತ್ಯಕ್ಕೆ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ 53. 20 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಕೆಎಸ್ ಆರ್ ಟಿಸಿ ಗೆ 13.16 ಕೋಟಿ ಆದಾಯ ಬಂದಿದೆ. ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರುಗೆ ಹೆಚ್ಚುವರಿಯಾಗಿ ಪ್ರತಿ ಕೆಜಿಗೆ 170 ರೂ.ಗಳಂತೆ 2,88,207 ಫಲಾನುಭವಿಗಳಿಗೆ 16.67 ಕೋಟಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3.48 ಲಕ್ಷ ಗ್ರಾಹಕರು ಶೂನ್ಯ ಬಿಲ್ ಪಡೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 3.50 ಲಕ್ಷ ಫಲಾನುಭವಿಗಳು ನೋಂದಣಿ ಮಾಡಿಸಿದ್ದಾರೆ. ಹವಾಮಾನ ಆಧರಿತ ಬೆಳೆ ವಿಮಾ ಯೋಜನೆಗೆ 500 ಕೋಟಿ ಒದಗಿಸುವ ಮೂಲಕ 3.1 ಲಕ್ಷ ತೋಟಗಾರಿಕೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲಾಗಿದೆ .
ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆಯನ್ನು ಸುಂದರ, ಪರಿಸರಸ್ನೇಹಿ, ಜನಸ್ನೇಹಿ ನಗರವನ್ನಾಗಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು ಜಲಜೀವನ್ ಮಿಷನ್ ಯೋಜನೆಯಡಿ ನಾಲ್ಕು ಹಂತದಲ್ಲಿ 1.16 ಲಕ್ಷ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು 882 ಕಾಮಗಾರಿಗಳನ್ನು ರೂಪಿಸಿದ್ದು, ಅವುಗಳಲ್ಲಿ 495 ಕಾಮಗಾರಿಗಳು ಮುಗಿದಿದ್ದು, 387 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ಬಿ.ಎಚ್. ವಿನಾಯಕ, ಜಿಲ್ಲಾಧಿಕಾರಿ ಡಾ. ಎಂ.ಎನ್. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ ಇದ್ದರು.