ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಬಳಿ ಭದ್ರಾನಾಲೆಗೆ ಅಳವಡಿಸಿದ್ದ ಅಕ್ರಮ ಪಂಪ್ ಸೆಟ್ ಗಳನ್ನು ಕಂದಾಯ, ನೀರಾವರಿ, ಬೆಸ್ಕಾಂ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ತೆರವುಗೊಳಿಸಿದರು.
ಭದ್ರಾ ನಾಲೆ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸುವ ಉದ್ದೇಶದಿಂದ ಕಂದಾಯ ಇಲಾಖೆಯ ಆರ್‌ಐ ಎಸ್.ಎನ್.ಬಸಣ್ಣ ಮತ್ತು ಮಲೇಬೆನ್ನೂರು ವಿಭಾಗದ ನೀರಾವರಿ ಇಲಾಖೆಯ ಎಇಇ ಧನಂಜಯ ಅವರ ನೇತೃತ್ವದಲ್ಲಿ ಅಕ್ರಮ ಪಂಪ್ ಸೆಟ್ ತೆರವು ಕಾರ್ಯಾಚರಣೆ ನಡೆಸಲಾಯಿತು.
ಬಸವಾಪಟ್ಟಣದಿಂದ ಹರಲೀಪುರದವರೆಗೆ ಸುಮಾರು 60 ಅನಧಿಕೃತ ಪಂಪ್‌ಗಳನ್ನು ತೆಗೆದು ಹಾಕಲಾಗಿದೆ. ಇಂದಿನ ಕಾರ್ಯಾಚರಣೆಯಲ್ಲಿ ಬೆಸ್ಕಾಂ ಮತ್ತು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು ಎಂದು ವಿಎ ಸಂತೋಷ್ ತಿಳಿಸಿದರು.
ಹರಿಹರ ತಾಲ್ಲೂಕಿನ ಭದ್ರಾ ನಾಲೆಯ ಕೊನೆಯ ಭಾಗದ ರೈತರಿಗೆ ತೊಂದರೆ ಆಗುತ್ತಿದೆ. ರೈತರು ನಾಲೆಗೆ ಈ ರೀತಿ ಅನಧಿಕೃತವಾಗಿ ಪಂಪ್ ಸೆಟ್ ಅಳವಡಿಸಿ ನೀರು ಪಡೆದುಕೊಳ್ಳುತ್ತಿರುವುದು ಕಾನೂನು ಬಾಹಿರ ಎಂದು ಅಧಿಕಾರಿಗಳು ಎಚ್ಚರಿಸಿದರು.



