ದಾವಣಗೆರೆ: ಈ ವರ್ಷ ಪೂರ್ವ ಮುಂಗಾರು ಉತ್ತಮವಾಗಿರುವುದರಿಂದ ರೈತ ಬಾಂಧವರು ಕಡಿಮೆ ನೀರನ್ನು ಬೆಳೆಸಿ, ಭತ್ತದ ಬೆಳೆಯನ್ನು ಕೂರ್ಗೆ ಮುಖಾಂತರ ಬಿತ್ತನೆ ಮಾಡಿ ಬೆಳೆಯಬಹುದು. ಈ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಕಾಲುವೆಯ ಕೊನೆಯ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಬೋರ್ ವೆಲ್ ಭತ್ತ ಬೆಳೆಯುವ ರೈತರಿಗೆ ಈ ಪದ್ಧತಿ ವರದಾನವಾಗುತ್ತದೆ. ಈ ಪದ್ಧತಿಯನ್ನು ರೈತರು ಅಳವಡಿಸಿಕೊಂಡು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು ಎಂದು ಕೇಂದ್ರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ. ಎನ್. ದೇವರಾಜ್ ಹಾಗೂ ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ.ಒ. ಅಭಿಪ್ರಾಯಪಟ್ಟಿದ್ದಾರೆ.
ಭತ್ತ ಪ್ರಮುಖವಾದ ಆಹಾರ ಬೆಳೆ. ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಬೆಳೆಯನ್ನು ಸುಮಾರು 50 ಸಾವಿರ ಪ್ರದೇಶದಲ್ಲಿ ಬೆಳೆಯುತ್ತಾರೆ. ಕಳೆದ ವರ್ಷ ಮಳೆಯ ಮಳೆಯ ಅಭಾವದಿಂದ ಭತ್ತದ ಬೆಳೆ ವಿಸ್ತರಣೆಯಲ್ಲಿ ಕಡಿಮೆಯಾಗಿತ್ತು. ಇದಕ್ಕೆ ಮುಖ್ಯ ಕಾರಣ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಆಗದೆ ಇರುವುದು ಹಾಗೂ ಬೋರ್ ವೆಲ್ ಗಳಲ್ಲೂ ನೀರು ಕಡಿಮೆಯಾಗಿರುವುದು. ಕಳೆದ ವರ್ಷ ಅಡಿಕೆ ಬೆಳೆಯನ್ನು ಉಳಿಸಿಕೊಳ್ಳಲು ಭತ್ತವನ್ನು ಬೆಳೆಯದಿರಲು ನಿರ್ಧರಿಸಿದರು.
ಭೂಮಿಸಿದ್ಧತೆ ಸರಿಯಾದ ರೀತಿಯಲ್ಲಿ ಆದಲ್ಲಿ ಈ ಪದ್ಧತಿಯಲ್ಲಿ ಕಳೆ ನಿರ್ವಹಣೆಯನ್ನು ಮಾಡಬಹುದು. ನೀರಾವರಿ ಪ್ರದೇಶದಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವ ರೈತರು ಕಳೆದ ಬಾರಿ ಬಳಸಿದ ತಳಿಯ ಬೀಜವನ್ನು ಬಿತ್ತನೆಗೆ ಬಳಸುವುದು ಸೂಕ್ತ .ಮೇ ಕೊನೆ ವಾರದಲ್ಲಿ ಉತ್ತಮ ಮಳೆಯಾಗಿದ್ದು, ಈ ಪದ್ಧತಿಯ ಭತ್ತ ಬೆಳೆಯನ್ನು ನೀರಾವರಿ ಹಾಗೂ ಮಳೆಯಾಶ್ರಿತ ಪ್ರದೇಶದಲ್ಲೂ ಕೂಡ ಬೆಳೆಯಬಹುದು.
ಈ ಪದ್ಧತಿಯಲ್ಲಿ ಭೂಮಿಸಿದ್ಧತೆಯ ಕಡೆ ಹೆಚ್ಚು ಗಮನ ಹರಿಸಬೇಕು, ಏಕೆಂದರೆ ನೇರ ಕೂರಿಗೆ ಭತ್ತ ಬಿತ್ತನೆ ಪದ್ಧತಿಯಲ್ಲಿ ಕಳೆಗಳ ನಿರ್ವಹಣೆ ಒಂದು ಸವಾಲು.
ಈ ಪದ್ಧತಿಯನ್ನು ಅಳವಡಿಸುವ ರೈತರು ಇಂತಹದ್ದೇ ತಳಿಯನ್ನು ಬಳಸಿ ಬೆಳೆಯಬೇಕು ಅಂತಿಲ್ಲ, ಭತ್ತದ ತಳಿಯಲ್ಲಿ ಉತ್ತಮ ಇಳುವರಿ ಕೊಡುವ ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ತಳಿಗಳನ್ನು ಬೆಳೆಯುವುದು ಸೂಕ್ತ.ಪ್ರತಿ ಎಕರೆಗೆ 10 ರಿಂದ 12 ಕೆಜಿ ಬಿತ್ತನೆ ಬೀಜ ಬಳಸಿ, ಏಕಕಾಲಕ್ಕೆ ಬೀಜ ಮತ್ತು ಗೊಬ್ಬರ ಬಿತ್ತನೆ ಮಾಡುವ ಸಂಯುಕ್ತ ಕೂರಿಗೆ ಬಳಸಿ ಬಿತ್ತನೆ ಮಾಡಿ. ಜೈವಿಕ ಗೊಬ್ಬರಗಳಾದ ಅಜೋಸ್ಪಿರಲಂ ಹಾಗು ರಂಜಕ ಕರಗಿಸುವ ಗೊಬ್ಬರವನ್ನು 500 ಗ್ರಾಂ ಪ್ರತಿ ಎಕರೆ ಬೀಜಕ್ಕೆ ಲೇಪನ ಮಾಡಿ ಬಿತ್ತನೆ ಮಾಡುವುದರಿಂದ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರದಲ್ಲಿ 10% ರಷ್ಟು ಕಡಿತ ಮಾಡಬಹುದು.
ಕಳೆ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ಭೂಮಿ ಸಿದ್ಧತೆಯು ಕೂಡ ಬಹಳ ಮುಖ್ಯ. ಆಳವಾದ ಉಳುಮೆಯ ಜೊತೆಗೆ ಕಲ್ಟಿವೇಟರ್ ಹಾಗೂ ಕುಂಟೆಯ ಮುಖಾಂತರ ಭೂಮಿಸಿದ್ಧತೆಯನ್ನು ಮಾಡಿಕೊಳ್ಳಬೇಕು. ಉತ್ತಮವಾದ ಭೂಮಿ ಸಿದ್ಧತೆಯಿಂದ, ಶೇಕಡ 49ರಷ್ಟು ಕಳೆ ನಿರ್ವಹಣೆಯನ್ನು ಸಾಧಿಸಬಹುದು.
ಬಿತ್ತನೆ ಮಾಡಿದ 48 ತಾಸುಗಳ ಒಳಗಾಗಿ ಪೆಂಡಾ ಮಿಥುಲಿನ್ 700 ಮಿಲಿ ಪ್ರತಿ ಎಕರೆಗೆ ಬಳಸಬೇಕು.
ಬಿತ್ತನೆಯಾದ 25 ದಿವಸಗಳ ಒಳಗಾಗಿ Bispyribac sodium 10 % SC 120 ಮಿಲಿ ಪ್ರತೀ ಎಕರೆಗೆ ಸಿಂಪರಣೆ ಮಾಡಬೇಕು.
ಎತ್ತಿನ ಸಹಾಯದಿಂದ ಎಡೆ ಹೊಡೆಯಬೇಕು.
30 ದಿವ್ಸದೊಳಗೆ ಕೈಕಳೆಯನ್ನು ತೆಗಿಸಬೇಕು.
ಈ ಪದ್ಧತಿಯಲ್ಲಿ ಭತ್ತ ಬೆಳೆಯುವುದರಿಂದ ಶೇಕಡ 30 ರಿಂದ 35 ನೀರಿನ ಉಳಿತಾಯವನ್ನು ಮಾಡಬಹುದು. ಸಾಮಾನ್ಯ ನಾಟಿ ಪದ್ಧತಿಯಲ್ಲಿ ಒಂದು ಕೆಜಿ ಅಕ್ಕಿ ಉತ್ಪಾದನೆ ಮಾಡಲು ಸುಮಾರು 5000 ಲೀಟರ್ ನಷ್ಟು ನೀರನ್ನು ಬಳಸುತ್ತೇವೆ. ಆದರೆ ನೇರ ಕೂರಿಗೆ ಭತ್ತ ಬಿತ್ತನೆಯ ಪದ್ಧತಿಯಲ್ಲಿ 1500 ಲೀಟರ್ ನೀರು ಬೇಕಾಗುತ್ತದೆ.
ಈ ಪದ್ದತಿಯನ್ನು ಅಳವಡಿಸಿಕೊಳ್ಳುವುದರಿಂದ ಉತ್ಪಾದನಾ ವೆಚ್ಚದಲ್ಲಿ ಶೇಕಡ 10 ರಿಂದ 15 ಪರ್ಸೆಂಟ್ ಕಡಿಮೆ ಮಾಡಬಹುದು. ನೀರಿನ ಉಳಿತಾಯ, ಹಣದ ಉಳಿತಾಯ ಹಾಗೂ ಪರಿಸರ ಸಂರಕ್ಷಣೆಯನ್ನು ಕೂಡ ಮಾಡಬಹುದು.ಕಳೆದ ಬೇಸಿಗೆ ಹಂಗಾಮಿನಲ್ಲಿ ಶಾಂತಿವನ ಸಿರಿಗೆರೆಯಲ್ಲಿ ಈ ಪದ್ಧತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ಬೆಳೆದು ತೋರಿಸಿಕೊಡಲಾಗಿದೆ .
ರೈತರ ಅನಿಸಿಕೆ: ಈ ಪದ್ಧತಿಯ ಮುಖಾಂತರ ನಾನು ಭತ್ತವನ್ನು ಒಂದು ಎಕರೆ ಪ್ರದೇಶದಲ್ಲಿ ಬೆಳೆದು ಸುಮಾರು 20ರಿಂದ 22 ಕ್ವಿಂಟಲ್ ಅಷ್ಟು ಇಳುವರಿಯನ್ನು ಪಡೆದಿರುತ್ತೇನೆ ಎಂದು ಹಾಲವರ್ತಿ ಗ್ರಾಮದ ದ್ಯಾಮಣ್ಣ ಅಭಿಪ್ರಾಯಪಟ್ಟಿದ್ದಾರೆ.