ಡಿವಿಜಿ ಸುದ್ದಿ, ಹೊನ್ನಾಳಿ: ತಾಲೂಕಿನ ಸುಂಕದಕಟ್ಟ ಗ್ರಾಮದ ಮುಜರಾಯಿ ಇಲಾಖೆಯ ಎ ಶ್ರೇಣಿಯ ಶ್ರೀ ಮಂಜುನಾಥ ಸ್ವಾಮಿ ಹಾಗೂ ನರಸಿಂಹ ಸ್ವಾಮಿ ದೇವಾಲಯದಲ್ಲಿ ಇಂದು ಹುಂಡಿ ಎಣಿಕೆ ಕಾರ್ಯ ನಡೆಯಿತು.
ತಹಸೀಲ್ದಾರ್ ತುಷಾರ್ ಬಿ.ಹೊಸೂರ್, ರಾಜಸ್ವ ನಿರೀಕ್ಷಕ ವೇಣುಗೋಪಾಲ್, ವಿಎ ಎಚ್.ಆರ್. ಬಸವರಾಜ್, ಕಂದಾಯ ಇಲಾಖೆ ಸಿಬ್ಬಂದಿ, ಪ್ರಧಾನ ಅರ್ಚಕರಾದ ಎಸ್. ರಾಜುಸ್ವಾಮಿ ಹಾಗೂ ಗ್ರಾಮದ ಮುಖಂಡರ ಸಮ್ಮುಖದಲ್ಲಿ ನಡೆಯಿತು. ಒಟ್ಟು 29,00,135 ರೂಪಾಯಿ ಹಣ ಸಂಗ್ರಹವಾಗಿದೆ.
ಮುಜರಾಯಿ ಇಲಾಖೆ ವತಿಯಿಂದ ಪ್ರತಿ 4 ತಿಂಗಳಿಗೊಮ್ಮೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದು, ದೇವಸ್ಥಾನದ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರ ಸಮಕ್ಷಮದಲ್ಲಿ ಎಣಿಕೆ ನಡೆಸಲಾಯಿತು.
ಈ ಬಾರಿ ಕೊರೊನಾ ಕಾರಣದಿಂದ ಎಂಟು ತಿಂಗಳ ಬಳಿಕ ಎಣಿಕೆ ಕಾರ್ಯ ನಡೆಸಲಾಗಿದೆ ಎಂದು ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಹೇಳಿದರು. ಭಕ್ತರು ದೇವರಿಗೆ ಸಮರ್ಪಿಸಿದ ಹುಂಡಿಯ ಹಣವನ್ನು ಹೊನ್ನಾಳಿಯ ಕೆನರಾ ಬ್ಯಾಂಕಿನ ಖಾತೆಗೆ ಜಮಾ ಮಾಡಲಾಗುತ್ತಿದ್ದು, ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುವುದು ಎಂದು ಅವರು ತಿಳಿಸಿದರು.
ದೇವಸ್ಥಾನದ ಗೋಪುರ 1 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ. ಅದೇ ರೀತಿಯಲ್ಲಿ 80 ಲಕ್ಷ ರೂ.ಗಳ ವೆಚ್ಚದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಸಮುದಾಯ ಭವನ, ಊಟದ ಹಾಲ್ ಕೂಡಾ ನಿರ್ಮಾಣಗೊಂಡಿದೆ ಎಂದರು.
ಗೋಪುರ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಎಇಇ ಕೆ.ವಿ. ಮಲ್ಲಿಕಾರ್ಜುನ್, ಎಇ ಎಚ್.ವಿ. ಶಶಿಧರ್ ಪರಿಶೀಲಿಸಿದರು. ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಎಚ್. ನರಸಪ್ಪ, ಮುಖಂಡರಾದ ಡಿ. ಬಸಪ್ಪ, ಎಸ್.ಕೆ. ಕರಿಯಪ್ಪ, ರಾಜಸ್ವ ನಿರೀಕ್ಷಕ ಹಾಗೂ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ವೇಣುಗೋಪಾಲ್, ಮುಜರಾಯಿ ಇಲಾಖೆಯ ವಿಷಯ ನಿರ್ವಾಹಕಿ ರೇಣುಕಮ್ಮ, ಗ್ರಾಮ ಲೆಕ್ಕಾಧಿಕಾರಿ ಎಚ್.ಆರ್. ಬಸವರಾಜ್, ಚೆಲುವರಾಜ್, ದೇವಸ್ಥಾನದ ಪ್ರಧಾನ ಅರ್ಚಕರಾದ ಎಸ್. ರಾಜುಸ್ವಾಮಿ, ಜವಾನ ಎ.ಕೆ. ಮಂಜಪ್ಪ, ಕಾವಲುಗಾರ ಎಸ್.ಎನ್. ಶ್ರೀಕಾಂತ್, ಹೊನ್ನಾಳಿ ಕೆನರಾ ಬ್ಯಾಂಕಿನ ಸಿಬ್ಬಂದಿ ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.



