ದಾವಣಗೆರೆ: ಕಾಣೆಯಾಗಿದ್ದ ಮಗುವೊಂದನ್ನು ಪತ್ತೆ ಹಚ್ಚಿ ಪೋಷಕರ ಮಡಿಲಿಗೆ ಹೊಯ್ಸಳ ಪೊಲೀಸರು ಸೇರಿಸಿದ್ದಾರೆ.
ದಿನಾಂಕ: 24-04-2025 ರಂದು ಮಧ್ಯಾಹ್ನ ಹೊನ್ನಾಳಿ ಠಾಣೆಯ 112 ಹೊಯ್ಸಳಕ್ಕೆ ಕರೆ ಬಂದಿದ್ದು, ಕೂಡಲೇ 112 ಕರ್ತವ್ಯ ಅಧಿಕಾರಿಗಳು ಘಟನಾ ಸ್ಥಳವಾದ ಹೊನ್ನಾಳಿ ಟೌನ್ ನಲ್ಲಿನ ಬಸ್ ಸ್ಟ್ಯಾಂಡ್ ಗೆ ಹೋಗಿ ದೂರುದಾರರನ್ನು ಭೇಟಿ ಮಾಡಿ ವಿಚಾರಿಸಿಧದರು. ಹೊನ್ನಾಳಿ ಬಸ್ ಸ್ಟ್ಯಾಂಡ್ ನಲ್ಲಿ ಮಲೇಬೆನ್ನೂರು ವಾಸಿ ಸವಿತಾ ತಮ್ಮ ತವರೂರುಗೆ ತೆರೆಳಲು ಬಂದಿದ್ದರು. ಈ ವೇಳೆ ತಮ್ಮ ಸಂಬಂಧಿಕರೊಂದಿಗೆ ಮಾತನಾಡುತ್ತಿದ್ದಾಗ 5 ವರ್ಷದ ಮಗಳು ಕಾಣದೇ ಇದ್ದು, ಅಲ್ಲಿ ಹುಡುಕಾಡಿದ್ದು ಸಿಗದೇ ಇದ್ದಾಗ ಗಾಬರಿಗೊಂಡು 112 ಗೆ ಕರೆ ಮಾಡಿದ್ದಾಗಿ ತಿಳಿಸಿರುತ್ತಾರೆ.
ತಕ್ಷಣ ಕಾರ್ಯಪ್ರವೃತ್ತರಾದ 112 ಹೊಯ್ಸಳ ಅಧಿಕಾರಿಗಳು ಬಸ್ ಸ್ಟ್ಯಾಂಡ್ ಸುತ್ತಮುತ್ತ ಹುಡುಕಾಡಿದರು. ಅಲ್ಲಿ ಕಾಣದೇ ಇದ್ದಾಗ ಅನುಮಾನಗೊಂಡು ಕೂಡಲೇ ಆ ಸಮಯದಲ್ಲಿ ಬಸ್ ಸ್ಟ್ಯಾಂಡ್ ನಿಂದ ಬೇರೆ ಬೇರೆ ಕಡೆಗೆ ತೆರಳಿದ ಬಸ್ ಗಳ ಮಾಹಿತಿ ಪಡೆದರು. ಹಿರೆಕೆರೂರು ಕಡೆಗೆ ಹೋಗುತ್ತಿದ್ದ ಬಸ್ ರಟ್ಟಿಹಳ್ಳಿ ಬಳಿ ಮಾಸೂರು ಗ್ರಾಮದ ಬಳಿ ಇದ್ದಾಗ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕರನ್ನು ವಿಚಾರಸಿದಾಗ ಬಸ್ ನಲ್ಲಿ ಮಗುವು ಇರುವುದು ತಿಳಿದು ಬಂದಿದೆ.
ಮಗಳು ಸವಿತಾ ಅವರ ಗಮನಕ್ಕೆ ಬಾರದೇ ಬೇರೆ ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿಕೊಂಡು ಹೋಗಿದ್ದು ತಿಳಿದುಬಂದಿರುತ್ತದೆ. ಕೂಡಲೇ ಮಗುವಿನ ಪೋಷಕರನ್ನು ವಾಹನದಲ್ಲಿ ಮಗುವಿದ್ದ ಸ್ಥಳಕ್ಕೆ ಕಳುಹಿಸಿದ್ದು ಪೋಷಕರು ತಮ್ಮ ಮಗಳನ್ನು ಕರೆದುಕೊಂಡು ಬಂದಿದ್ದಾರೆ. ಈ ಮೂಲಕ ಬಸ್ಸಿನಲ್ಲಿ ಹೋಗಿದ್ದ ಮಗುವನ್ನು ಹೊಯ್ಸಳ ಪೊಲೀಸರು ಪೋಷಕರ ಮಡಿಲು ಸೇರಿಸಿದ್ದಾರೆ.
ಈ ಕಾರ್ಯಾಚರಣೆ ಯಶಸ್ವಿಗೊಳಿಸಿದ 112 ಹೊಯ್ಸಳ ಕರ್ತವ್ಯ ಅಧಿಕಾರಿಗಳಾದ ಹೆಡ್ ಕಾನ್ಸ್ಟೇಬಲ್ ಹರೀಶ್ ಹಾಗೂ 112 ಹೊಯ್ಸಳ ಚಾಲಕ ಲೋಕೇಶ್ವರಪ್ಪ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.