ದಾವಣಗೆರೆ: ಜನ-ಜಾನುವಾರುಗಳಿಗೆ ಮೀಸಲಿರಿಸಿರುವ ಭೂಮಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸೋಲಾರ್ ಪ್ಲಾಂಟ್ ನಿರ್ಮಿಸಲು ರೈತರ ಭೂಮಿ ವಶಪಡಿಸಿಕೊಳ್ಳುವುದು ಸರಿಯಲ್ಲ. ಈ ಬಗ್ಗೆ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.
ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿ ಅಧಿಕಾರಿಗಳು ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಸರ್ಕಾರಿ ಜಮೀನು ಗುರ್ತಿಸಿ, ಗಡಿ ಕಂಬ ನೆಡುತ್ತಿದ್ದ ಸುದ್ದಿ ತಿಳಿದು, ಮಧ್ಯಾಹ್ನ ಸ್ಥಳೀಯ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಸ್ಥಳಕ್ಕೆಆಗಮಿಸಿ ಧರಣಿ ನಡೆಸಿದರು.
ಕಳೆದ 40 ವರ್ಷಗಳಿಂದ ಉಳುಮೆ ಮಾಡುತ್ತಿದ್ದ 49 ಎಕರೆ ಹಾಗೂ ಹರಳಹಳ್ಳಿ ಗ್ರಾಮದ 22 ಎಕರೆ ಗೋಮಾಳ ಜಮೀನನ್ನು ಕಂದಾಯ ಇಲಾಖೆ & ಬೆಸ್ಕಾಂ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಸೋಲಾರ್ ಅಳವಡಿಕೆಗೆ ಖಾಸಗಿ ಕಂಪನಿಗೆ ಮಂಜೂರು ಮಾಡಿದ್ದು, ಇಂದು ಬೆಳಗಿನ ಜಾವ ಪೊಲೀಸ್ ಇಲಾಖೆಯ ರಕ್ಷಣೆ ಪಡೆದು ರೈತ ಬೆಳೆಗಳನ್ನು ನಾಶ ಮಾಡಿ ರೈತರ ಮೇಲೆ ದಬ್ಬಾಳಿಕೆ ಮಾಡಿ ಜಮೀನು ವಶಪಡಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾಟರಿ, ಎಸ್ಪಿ, ಬೆಸ್ಕಾಂ ಎಂಡಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಯಾವುದೇ ಕಾರಣಕ್ಕೂ ರೈತರ ಜಮೀನನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿ ಜೆಸಿಬಿ ಗಳನ್ನು ಸ್ಥಳದಿಂದ ಖಾಲಿ ಮಾಡಿಸಿ. ಕೇಂದ್ರ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡಿ ಇಂತಹ ಯೋಜನೆಗಳನ್ನು ಜಾರಿಗೆ ತರುತ್ತದೆ. ರೈತರು ಉಳುಮೆ ಮಾಡುವ ಜಮೀನುಗಳಿಂದ ಅವರನ್ನು ಒಕ್ಕಲೆಬ್ಬಿಸಿ ಎಂದು ಎಲ್ಲಿಯೂ ಸರ್ಕಾರ ಹೇಳಿಲ್ಲ. ಆದರೆ ಅಧಿಕಾರಿಗಳು ಖಾಸಗಿ ಕಂಪನಿಗಳೊಂದಿಗೆ ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಧಿಕಾರಿಗಳ ಈ ಕ್ರಮ ಸಹಿಸುವುದಿಲ್ಲ. ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಹೇಳಿದ್ದರು.
ಅಧಿಕಾರಿಗಳು ಸರ್ವೇ ಕಾರ್ಯ ಸ್ಥಗಿತಗೊಳಿಸಿ, ಜಮೀನು ರೈತರಿಗೆ ಬಿಟ್ಟುಕೊಡಬೇಕು. ಇಲ್ಲವಾದಲ್ಲಿ ಉಳುಮೆ ಮಾಡುತ್ತಿರುವ ರೈತರು ಹಾಗೂ ಗ್ರಾಮಸ್ಥರ ಜೊತೆಗೂಡಿ ತಾಲೂಕು ಕಚೇರಿ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.
ರೇಣುಕಾಚಾರ್ಯ ಮತ್ತು ರೈತರು, ಬೆಂಬಲಿಗರು ಧರಣಿ ನಡೆಸಿದ ಸಂದರ್ಭ ಉಪವಿಭಾಗಾಧಿಕಾರಿ ಅಭಿಷೇಕ್ ಪಿಎಂ ಕುಸುಮ್ ಯೋಜನೆ ಪ್ರಯೋಜನ ಬಗ್ಗೆ ವಿವರಿಸಲು ಮುಂದಾದರು. ಇದು ಸ್ಥಳೀಯ ರೈತರಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ಆಗ ರೇಣುಕಾಚಾರ್ಯ ಅವರು, ಯೋಜನೆ ನೆಪದಲ್ಲಿ ಪ್ರಧಾನಿ ಹೆಸರು ಮಧ್ಯೆ ಎಳೆಯಬೇಡಿ. ಇದು ಯೋಜನೆ ಹೆಸರು ಮಾತ್ರ. ಮೋದಿ ಅವರು ಇದೇ ಅರಬಗಟ್ಟೆ ಜಮೀನಿನಲ್ಲಿಯೇ ಸೋಲಾರ್ ಪ್ಲಾಂಟ್ ಮಾಡಿ ಎಂದು ಹೇಳಿಲ್ಲ. ಆದ್ದರಿಂದ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಪ್ಲಾಂಟ್ ನಿರ್ಮಾಣ ಮಾಡಿ ಎಂದು ತಾಕೀತು ಮಾಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಶಾಂತರಾಜ್ ಪಾಟೀಲ್, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಶಿವು ಹುಡೇದ್, ಎಸ್.ಎಸ್. ಬೀರಪ್ಪ ರವಿಕುಮಾರ್, ಅರಕೆರೆ ನಾಗರಾಜ್, ಉಳುಮೆ ಮಾಡುತ್ತಿದ್ದ ರೈತರು, ಅರಬಗಟ್ಟೆ ಗ್ರಾಮಸ್ಥರು ಪಾಲ್ಗೊಂಡಿದ್ದರು.



