ದಾವಣಗೆರೆ: ಅಭಿಜಾತ ಸ್ಥಾನಮಾನದ ಶ್ರೇಷ್ಠತೆಯನ್ನು ಪಡೆದಿರುವ ಕನ್ನಡ ಭಾಷೆಯು ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯಾಗಿದ್ದು,ರಾಷ್ಟ್ರಭಾಷೆಯ ಹೆಸರಲ್ಲಿ ಮತ್ತೊಂದು ಭಾಷೆಯ ಅತಿಕ್ರಮಣ ಪ್ರವೇಶವನ್ನು ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಖಂಡಿಸಬೇಕಾಗಿದೆ ಎಂದು ಚನ್ನಗಿರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವಾಪಟ್ಟಣದ ಎಲ್.ಜಿ.ಮಧುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದಿ ಎನ್ನುವುದು ರಾಷ್ಟ್ರಭಾಷೆಯಾಗಿಲ್ಲ ಎನ್ನುವ ಚಿತ್ರನಟ ಸುದೀಪ್‌ರವರ ಹೇಳಿಕೆಗೆ ಬೆಂಬಲವನ್ನು ವ್ಯಕ್ತಪಡಿಸಿ ಬಹುತ್ವ ಭಾಷಾ ಸಂಸ್ಕೃತಿಯ ಭಾರತದಲ್ಲಿ ಹಿಂದಿ ಭಾಷೆಯನ್ನು ಹೊತ್ತು ಮೆರೆಸುವುದರ ಅಗತ್ಯವಿಲ್ಲ. ಭಾರತೀಯ ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೂಚಿಸಿರುವ ಭಾಷೆಗಳಲ್ಲಿ ಹಿಂದಿ ಒಂದು ಭಾಷೆ ಅಷ್ಟೇ ಅದಕ್ಕೆ ವಿಶೇಷ ಮಹತ್ವವನ್ನು ನೀಡುವುದು ಮೂರ್ಖತನ ಪರಮಾವಧಿ ಎಂದು ಅಭಿಪ್ರಾಯಪಟ್ಟಿದ್ದಾರೆ.ಭಾರತದ ಸಂವಿಧಾನದ ಹದಿನಾಲ್ಕನೇ ಪರಿಚ್ಛೇದವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ. ಹಿಂದಿಯೇ ರಾಷ್ಟ್ರಭಾಷೆ ಎನ್ನುವ ಮೂಲಕ ಇತರ ಭಾರತೀಯ ಭಾಷೆಗಳನ್ನು ಕಡೆಗಣಿಸಿ ಇತರ ಭಾಷಿಕರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸುವುದು ಅಕ್ಷಮ್ಯ ಇದು ಸಂವಿಧಾನದ ಸಮಾನತೆಯ ಆಶಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.



