ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ಪ್ರತಿಷ್ಠಾಪಿಸಿರುವ ಶ್ರೀ ಗಣಪತಿ ಮೂರ್ತಿ ವಿಸರ್ಜನೆ ಹಾಗೂ ಬೃಹತ್ ಶೋಭಾಯಾತ್ರೆ ಅ.14ರಂದು ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ಜೊಳ್ಳಿ ಗುರು, ಅ.14 ಗಣೇಶ ಮೂರ್ತಿ ವಿಸರ್ಜನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು(ಅ.10) ಅನ್ನ ಸಂತರ್ಪಣೆ ನಡೆಯಲಿದ್ದು, 30 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುವುದು. ಅ.12ರ ಬೆಳಗ್ಗೆ 11.30ಕ್ಕೆ ಹೈಸ್ಕೂಲ್ ಮೈದಾನದಿಂದ ಬೃಹತ್ ಬೈಕ್ ರಾಲಿ ನಡೆಯಲಿದೆ. ಜಿಲ್ಲೆಯ ಜನ ಪ್ರತಿನಿಧಿಗಳು ಬೈಕ್ ರಾಲಿಗೆ ಚಾಲನೆ ನೀಡುವರು. ಹೈಸ್ಕೂಲ್ ಮೈದಾನದಿಂದ ಹೊರಟು ಹಳೆ ಕೋರ್ಟ್ ರಸ್ತೆ, ಗಡಿಯಾರಕಂಬ, ಕಾಳಿಕಾದೇವಿ ರಸ್ತೆ, ದುರ್ಗಾಂಬಿಕಾ ದೇವಸ್ಥಾನ, ವೀರ ಮದಕರಿ ನಾಯಕ ವೃತ್ತ , ಪಿಬಿ ರಸ್ತೆ, ವಿನೋಬ ನಗರ 2ನೇ ಮುಖ್ಯ ರಸ್ತೆ,ವಾಟರ್ ಟ್ಯಾಂಕ್ ಬಿಐಇಟಿ ರಸ್ತೆ, ವಿದ್ಯಾನಗಗರ, ಹದಡಿ ರಸ್ತೆ ಮಾರ್ಗವಾಗಿ ಹೈಸ್ಕೂಲ್ ಮೈದಾನದಲ್ಲಿ ಬೈಕ್ ರಾಲಿ ಮುಕ್ತಾಯವಾಗಲಿದೆ ಎಂದರು.
14ರ ಬೆಳಿಗ್ಗೆ 10.30ಕ್ಕೆ ಶ್ರೀ ಮಹಾ ಗಣಪತಿ ವಿಸರ್ಜನೆ, ಬೃಹತ್ ಶೋಭಾಯಾತ್ರೆ ಆರಂಭವಾಗಲಿದೆ. ಎಂದಿನಂತೆ ಚಂಡೆ ವಾದ್ಯ ಸೇರಿ ಮಂಗಳ ವಾದ್ಯಗಳ ಸಹಿತ ಸುಮಾರು 5-6
ಡಿಜೆಗಳೊಂದಿಗೆ ಶೋಭಾಯಾತ್ರೆ ಸಾಗಲಿದೆ. ಹೈಸ್ಕೂಲ್ ಮೈದಾನದಿಂದ ಅಕ್ಕ ಮಹಾದೇವಿ ರಸ್ತೆ, ಅಂಬೇಡ್ಕರ್‌ವೃತ್ತ ಜಯದೇವ ವೃತ್ತ, ಕುವೆಂಪು ರಸ್ತೆ, ಪಿಬಿ ರಸ್ತೆ, ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದ ಮಾರ್ಗವಾಗಿ ಸಾಗಿ ಸಂಗೊಳ್ಳಿ ರಾಯಣ್ಣವೃತ್ತದಲ್ಲಿ ಶೋಭಾಯಾತ್ರೆ ಮುಕ್ತಾಯವಾಗಿದೆ. ಎಂದು ತಿಳಿಸಿದರು.
ಶೋಭಾಯಾತ್ರೆಗೆ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವಎಸ್.ಎ.ರವೀಂದ್ರನಾಥ ಸೇರಿ ಅನೇಕ ಮುಖಂಡರು, ಭಾಗವಹಿಸುವರು.ಶೋಭಾಯಾತ್ರೆಯುದ್ದಕ್ಕೂ ನೀರು, ಪ್ರಸಾದ ವ್ಯವಸ್ಥೆಯನ್ನು ದಾನಿಗಳ ಸಹಕಾರದಿಂದ ಮಾಡಲಾಗಿದೆ. ಲಕ್ಷಾಂತರ ಜನರು ಶೋಭಾಯಾತ್ರೆಗೆ ಸೇರುವ ನಿರೀಕ್ಷೆ ಇದೆ ಎಂದರು.
ಮುಖಂಡ ಶ್ರೀನಿವಾಸ ಮಾತನಾಡಿ, ದಾವಣಗೆರೆಯ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಯಾವುದೇ ಚಿತ್ರನಟರ ಬಾವುಟ ಪ್ರದರ್ಶನ ಮಾಡಬಾರದು. ಗಣಪತಿ, ಆಂಜನೇಯ ಸ್ವಾಮಿಯ ಬಾವುಟ ಪ್ರದರ್ಶಿಸಬೇಕು ಎಂದರು.ಈ ಸಂದರ್ಭದಲ್ಲಿ ಜಯಪ್ರಕಾಶ್ ಮಾಗಿ, ಕುಮಾರ, ಡಿ.ಜಿ.ಮಂಜುನಾಥ, ಸಿದ್ದೇಶ, ನವೀನಕುಮಾರ, ಮಂಜುನಾಥ, ಆದಿತ್ಯ, ಬಿ.ಎಂ.ಮಧು, ಗಿರೀಶ, ವಿನಾಯಕ ಬ್ಯಾಡಗಿ ಇತರರಿದ್ದರು.