ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯಲ್ಲಿ ಇಡೀ ರಾತ್ರಿ ವರುಣ ಅಬ್ಬರಿಸಿ ಬೊಬ್ಬಿರಿದಿದೆ. ರಾತ್ರಿ ಪೂರ್ತಿ ಎಡೆಬಿಡದೆ ಸುರಿದ ಮಳೆಗೆ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ.
ದಾವಣಗೆರೆ ನಗರದಲ್ಲಿ ಭಾರೀ ಪ್ರಮಾಣದ ಮಳೆಯಿಂದ ಕಾಲುವೆಗಳು ತುಂಬಿ ರಸ್ತೆಗಳಲ್ಲಿ ನೀರು ಹರಿಯುತ್ತಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮರಗಳು ಧರೆಗೆ ಉರುಳಿದ್ದು, ಇನ್ನೂ ಕೆಲವು ಕಡೆ ಮನೆ ಗೋಡೆಗಳು ಕುಸಿದು ಬಿದ್ದಿವೆ. ದಾವಣಗೆರೆ ಮಾತ್ರವಲ್ಲದೆ ಜಿಲ್ಲೆಯ ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು ಭಾಗದಲ್ಲಿಯೂ ಜೋರು ಮಳೆಯಾಗಿದೆ.
ಇನ್ನೂ ಗ್ರಾಮೀಣ ಭಾಗದಲ್ಲಿ ಹಳ್ಳಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ಸಣ್ಣ ಸಣ್ಣ ಸೇತುವೆಗಳು ಮುಳುಗಡೆಯಾಗಿವೆ. ದಾವಣಗೆರೆ, ಬೇತೂರು, ಕಡ್ಲೇಬಾಳು, ಕೊಂಡಜ್ಜಿ, ಕಕ್ಕರಗೊಳ್ಳ, ಆವರಗೊಳ್ಳ, ಬಾತಿ, ಶಾಮನೂರು, ಹದಡಿ, ಬಾಡ ಸೇರಿದಂತೆ ಎಲ್ಲ ಕಡೆ ಜೋರು ಮಳೆಯಾಗಿದೆ.
ಜೋರು ಮಳೆಯಿಂದ ಕೊಯ್ಲಿಗೆ ಬಂದಿದ್ದ ಮೆಕ್ಕೆಜೋಳ ಬೆಳೆ ನೀರು ಪಾಲಾಗಿದೆ. ಈ ಬಾರಿ ಮುಂಗಾರು ಮಳೆಯು ಸಹ ಅಬ್ಬರಿಸಿದ್ದರಿಂದ ಅತಿ ತೇವಾಂಶದಿಂದ ಮೆಕ್ಕೆಜೋಳ ಬೆಳೆ ಕುಂಠಿತವಾಗಿತ್ತು. ಅಷ್ಟೋ ಇಷ್ಟೋ ಉಳಿದ ಮೆಕ್ಕೆಜೋಳ ಈಗ ಕೊಯ್ಲಿಗೆ ಬಂದಿದೆ. ಹಿಂಗಾರಿನ ಸತತ ಮಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮೆಕ್ಕೆಜೋಳದ ಹೊಲದಲ್ಲಿ ನೀರು ಹರಿಯುತ್ತಿದ್ದು, ನೆಲಕ್ಕೆ ಬಿದ್ದ ಮೆಕ್ಕೆಜೋಳ ಮೊಳಕೆಯಾಗುತ್ತಿವೆ. ಇನ್ನು ಭತ್ತದ ಗದ್ದೆಯಲ್ಲಿ ನೀರು ಹರಿಯುವುದರಿಂದ ಬೆಳೆ ನೆಲಕ್ಕೆ ಬಿದ್ದು ಹಾನಿ ಉಂಟಾಗಿದೆ.