ದಾವಣಗೆರೆ: ಮಿಷನ್ ಇಂದ್ರಧನುಷ್ ಲಸಿಕಾಕರಣವು ಸೆ.12 ರಿಂದ 16 ರವೆಗೆ ನಡೆಯಲಿದ್ದು, ಅಂಗನವಾಡಿಗಳಿಲ್ಲದ ಜನ ವಸತಿ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ನೇಮಿಸಿ ಇಂದ್ರಧನುಷ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ.ಎಂ.ವಿ ತಿಳಿಸಿದರು.
ಸೆಪ್ಟಂಬರ್ 5 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಸಿದ ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ಡಿಟಿಎಫ್‍ಐ ಸಭೆಯ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿ ದಾವಣಗೆರೆ ಜಿಲ್ಲೆಯಲ್ಲಿ 2017ರಲ್ಲಿ ಇಂದ್ರಧನುಷ್ ಅಭಿಯಾನವು ಪ್ರಾರಂಭವಾಗಿರುತ್ತದೆ. 5 ವರ್ಷದೊಳಗಿನ ಲಸಿಕೆ ವಂಚಿತ ಮಕ್ಕಳನ್ನು ಗುರುತಿಸಿ ಇಂದ್ರಧನುಷ್ ಲಸಿಕೆ ನೀಡಲಾಗುತ್ತಿದೆ. ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದ ಮಕ್ಕಳ ಮಾಹಿತಿ ಸಂಗ್ರಹಿಸಬೇಕು ಎಂದು ತಿಳಿಸಿದರು.
ಈಗಾಗಲೇ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮವು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕೆಂದರು.ಲಸಿಕೆ ನೀಡುವಾಗ ಯಾವುದೇ ಲೋಪದೋಷ ಬಾರದಂತೆ ಮತ್ತು ತಾಯಂದಿರಿಗೆ ಲಸಿಕೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಮಕ್ಕಳಿಗೆ ಲಸಿಕೆ ಕೊಡಬೇಕು. ಆರೋಗ್ಯ ಇಲಾಖೆಯು ಕ್ರಿಯಾತ್ಮಾಕ ಜಾಹೀರಾತು ನೀಡುವ ಮೂಲಕ ಜನರಲ್ಲಿ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಈ ಅಭಿಯಾನದಲ್ಲಿ ಲಸಿಕೆ ಪಡೆಯದೇ ವಂಚಿತರಾಗಿರುವ, ಬಿಟ್ಟು ಹೋಗಿರುವ, ಪ್ರದೇಶಗಳು ಮತ್ತು ಸಮುದಾಯಗಳನ್ನು ಗುರುತಿಸಿ ಅವರಿಗೆ ಇಂದ್ರಧನುಷ್ ಲಸಿಕೆ ಹಾಕಲು ಗುರಿಯನ್ನು ಹೊಂದಬೇಕು ಎಂದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು ಮೊದಲನೆ ಹಂತ ಆಗಸ್ಟ್ 7 ರಿಂದ 12 ರವರೆಗೆ, ಎರಡನೇ ಹಂತ ಸೆಪ್ಟೆಂಬರ್ 12 ರಿಂದ 16ರವರೆಗೆ ಮತ್ತು ಮೂರನೇ ಹಂತ ಅಕ್ಟೋಬರ್ 9 ರಿಂದ 14 ರವರೆಗೆ ಈ ತಿಂಗಳುಗಳಲ್ಲಿ ನಿರ್ಧಿಷ್ಟ 6 ದಿನಗಳಂದು ಸಾರ್ವತ್ರಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ರಲ್ಲಿ ನೀಡಲಾದ ಲಸಿಕೆಗಳ ವಿವರವನ್ನು ಪೋರ್ಟಲ್ ನಲ್ಲಿ ದಾಖಲಿಸಿ ಇ-ಲಸಿಕಾಕರಣದ ಪ್ರಮಾಣ ಪತ್ರ ಸೃಜಿಸಲಾಗುವುದು. ಲಸಿಕೆ ಬಾಕಿ ಇರುವ, ಲಸಿಕೆ ಬಿಟ್ಟು ಹೋಗಿರುವ, ಲಸಿಕೆ ವಂಚಿತರಾಗಿರುವ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಲಸಿಕೆ ಹಾಕಿಸುವಲ್ಲಿ ಎಲ್ಲರ ಸಹಕಾರ ಮಹತ್ವದಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸಂವಹನ ತಂತ್ರಜ್ಞಾನ ಅಭಿವೃದ್ಧಿಗೆ ಬೆಂಬಲ ನೀಡಬೇಕು ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಯೋಜನಾಧಿಕಾರಿ ಮಲ್ಲನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ, ಹಾಗೂ ಆರೋಗ್ಯಾಧಿಕಾರಿ ಉಪಸ್ಥಿತಿರಿದ್ದರು.



