ದಾವಣಗೆರೆ: ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಫೆ. 8,9ರಂದು 5ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ, ಮಠದ 25ನೇ ವಾರ್ಷಿಕೋತ್ಸವ, ಲಿಂ.ಪುಣ್ಯಾನಂದಪುರಿ ಶ್ರೀಗಳ 15ನೇ ಪುಣ್ಯಾರಾಧನೆ, ಪ್ರಸನ್ನಾನಂದ ಶ್ರೀಗಳ 16ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಹಾಗೂ ನೂತನ ವಾಲ್ಮೀಕಿ ರಥ ಲೋಕಾರ್ಪಣೆ ನೆರವೇರಲಿದೆ.
ವಾಲ್ಮೀಕಿ ಸಮಾಜದ ಸಂಘಟನೆ ಹಾಗೂ ಜಾಗೃತಿಗಾಗಿ ಪ್ರತಿ ವರ್ಷ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಪ್ರಸನ್ನಾನಂದ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಲಿದೆ. ಈ ಬಾರಿ ವಾಲ್ಮೀಕಿ ಜಾತ್ರೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಿದ್ದು ಸರ್ಕಾರ ಸಮುದಾಯದ ಬಹುದೊಡ್ಡ ಬೇಡಿಕೆಯಾದ ಮೀಸಲಾತಿ ನೀಡಿರುವುದು ಹಾಗೂ ನೂತನವಾಗಿ 2ಕೋಟಿ ರು. ವೆಚ್ಚದಲ್ಲಿ 63ಅಡಿ ಎತ್ತರದ ವಾಲ್ಮೀಕಿ ರಥ ಲೋಕಾರ್ಪಣೆ ಮಾಡುತ್ತಿರುವುದು ಈ ಬಾರಿಯ ಜಾತ್ರೆಯ ವಿಶೇಷ.
ಫೆ.8ರಂದು ಬೆಳಿಗ್ಗೆ 7ಕ್ಕೆ ರಾಜನಹಳ್ಳಿ ಗ್ರಾಮದಿಂದ ಶ್ರೀಮಠದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಹಾಗೂ ವಾಲ್ಮೀಕಿ ಧ್ವಜಾರೋಹಣದ ಸಾನ್ನಿಧ್ಯ ಪ್ರಸನ್ನಾನಂದ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆ ರಾಜನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಚೈತ್ರಾ ಲಂಕೇಶ್ ವಹಿಸುವರು. ನಂತರ 8.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಜರುಗಲಿದೆ.
ಬೆಳಿಗ್ಗೆ 9ಕ್ಕೆ ಮಹಿಳಾ ಗೋಷ್ಠಿ ಹಮ್ಮಿಕೊಂಡಿದ್ದು ಇದರ ಉದ್ಘಾಟನೆಯ ನಿವೃತ್ತ ಅಪಾರ ಮುಖ್ಯಕಾರ್ಯದರ್ಶಿ ನಾಗಾಂಬಿಕಾ ದೇವಿ ನೆರವೇರಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಉದ್ಯೋಗ ಮೇಳ ಹಮ್ಮಿಕೊಂಡಿದ್ದು ಉದ್ಘಾಟನೆಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ನೆರವೇರಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ರೈತಗೋಷ್ಠಿ ಜರುಗಲಿದ್ದು ಕೃಷಿ ಸಚಿವ ಬಿ.ಸಿ ಪಾಟೀಲ್ ಉದ್ಘಾಟಿಸುವರು ಎಂದು ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಎಸ್.ವಿ.ರಾಮಚಂದ್ರಪ್ಪ ತಿಳಿಸಿದ್ಧಾರೆ.
ಫೆ. 8 ರಂದು ಸಂಜೆ 6ರಿಂದ ಬುಡಕಟ್ಟು ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ಕ್ಕೆ ವಾಲ್ಮೀಕಿ ವಿರಚಿತ ಸಂಪೂರ್ಣ ರಾಮಾಯಣ ನಾಟಕ ಜರುಗಲಿದೆ. ಫೆ.9ರ ಬೆಳಿಗ್ಗೆ 9ಕ್ಕೆ ಮಹರ್ಷಿ ವಾಲ್ಮೀಕಿ ನೂತನ ರಥಕ್ಕೆ ನಾಡಿನ ಶ್ರೀಗಳಿಂದ ಪುಷ್ಪಾರ್ಚನೆಯೊಂದಿಗೆ ಚಾಲನೆ ನೀಡಲಾಗುವುದು. ಸಾನ್ನಿಧ್ಯವನ್ನು ಸಿರಿಗೆರೆ ಮಠದ ಡಾ. ಶಿವಮೂರ್ತಿ ಸ್ವಾಮೀಜಿ, ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀ, ಪಂಚಮಸಾಲಿ ಪೀಠದ ವಚನಾನಂದ ಶ್ರೀ ಸೇರಿ ನಾಡಿನ ವಿವಿಧ ಸಮುದಾಯದ ಮಠಾಧೀಶರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 11ಕ್ಕೆ ಜನಜಾಗೃತಿ ಜಾತ್ರಾ ಮಹೋತ್ಸವದ ಉದ್ಘಾಟನೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೆರವೇರಿಸಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಲ್ಮೀಕಿ ವಿಜಯ ಸ್ಮರಣ ಸಂಪುಟ ಬಿಡುಗಡೆ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಾಲ್ಮೀಕಿ ರತ್ನ ಮತ್ತು ಮದಕರಿ ನಾಯಕ ಪ್ರಶಸ್ತಿ ಪ್ರದಾನ ಮಾಡುವರು. ವಾಲ್ಮೀಕಿ ಮಠದ ಪ್ರಸನ್ನಾನಂದ ಸ್ವಾಮೀಜಿ ಕಾರ್ಯಕ್ರಮದ ಹಿನ್ನೆಲೆ ಮತ್ತು ವಿಶೇಷತೆ ಬಗ್ಗೆ ಮಾತನಾಡುವರು.