ದಾವಣಗೆರೆ: ಮಕ್ಕಳಲ್ಲಿ ರಾಷ್ಟ್ರ, ನಾಡ ಭಕ್ತಿ ಬೆಳೆಸುವುದಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅಭಿಪ್ರಾಯಪಟ್ಟರು.
ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಮತ್ತು ಗೈಡ್ಸ್, ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕೊಂಡಜ್ಜಿ ಬಸಪ್ಪ 42ನೇ ಪುಣ್ಯಸ್ಮರಣೆ ಹಾಗೂ ದಿ.ಶಾಮನೂರು ಕಲ್ಲಪ್ಪ ಸಾವಿತ್ರಮ್ಮ ಆಡಳಿತ ಕಚೇರಿಯ ನೂತನ ಕಟ್ಟಡ ಮತ್ತು ದಿ.ಎಂ.ಕೆ ಪಾಣಿ ಅತಿಥಿಗೃಹ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಶಾಲಾ ಮಕ್ಕಳು ಕ್ರೀಡೆ, ಶಿಸ್ತು, ನಡೆನುಡಿ ಹಾಗೂ ಸೇವಾ ಮನೋಭಾವ ಮೂಡಿದಾಗ ಸದಾ ಕ್ರಿಯಾಶೀಲರಾಗಲು ಸಾಧ್ಯ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್ ಮಾತನಾಡಿ ಈಗಿನ ಮಕ್ಕಳು ಸಾಮಾಜಿಕ ಮಾಧ್ಯಮಗಳ ಮೇಲೆ ತುಂಬಾ ಅವಲಂಭಿತರಾಗಿದ್ದಾರೆ. ಆದ್ದರಿಂದ ಇಂತಹ ಮಾಧ್ಯಮಗಳಿಗೆ ಹೆಚ್ಚು ಒತ್ತು ನೀಡುವ ಬದಲಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಅಭ್ಯಾಸದಲ್ಲಿ ತೊಡಗಿ ಕೊಂಡಾಗ ಮಾತ್ರ ಬಹುಮುಖ ಪ್ರತಿಭೆಗಳಾಗಿ ಹೊರಹೊಮ್ಮುತ್ತಾರೆ ಎಂದರು.
ನಮ್ಮ ಸುತ್ತಮುತ್ತಲಿನ ಸ್ನೇಹಿತರು, ಸಾರ್ವಜನಿಕರಿಗೆ ಸ್ಕೌಟ್ಸ್ ಅಂಡ್ ಗೈಡ್ಸ್ ಮಹತ್ವದ ಬಗ್ಗೆ ತಿಳಿಸಬೇಕು. ಬಾಲ್ಯ ವಿವಾಹಗಳ ಬಗ್ಗೆ ಮಾಹಿತಿ ಸಿಕ್ಕಲ್ಲಿ ನಮಗೆ ತಿಳಿಸಬೇಕು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರು ಹಾಗೂ ಮಾಜಿ ಸಚಿವರಾದ ಪಿ.ಜಿ.ಆರ್ ಸಿಂಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ, ಕೊಂಡಜ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕರಿಯಮ್ಮ, ಕೊಂಡಜ್ಜಿ ಬಸಪ್ಪ ಸ್ಕೌಟ್ಸ್-ಗೈಡ್ಸ್ ತರಬೇತಿ ಕೇಂದ್ರ ಅಭಿವೃದ್ದಿ ಸಮಿತಿಯ ಅಧ್ಯಕ್ಷರು ಹಾಗೂ ರಾಜ್ಯ ಹಣಕಾಸು ಸಮಿತಿ ಸದಸ್ಯರು ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಖಜಾಂಚಿ ಡಾ.ಕೆ.ಬಿ ಗುರುಮೂರ್ತಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ.ಜೆ.ಚಿಗಟೇರಿ ಹಾಗೂ ಇತರರು ಭಾಗವಹಿಸಿದ್ದರು. ಸ್ಕೌಟ್ಸ್-ಗೈಡ್ಸ್ ತರಬೇತಿ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



