ದಾವಣಗೆರೆ: ಹರಿಹರ ಬೆಸ್ಕಾಂನಲ್ಲಿ ಅಧಿಕಾರಿಗಳ ಕಳ್ಳಾಟ ನಡೆದಿದೆ. ವಿದ್ಯುತ್ ಪರಿವರ್ತಕಗಳು (ಟಿಸಿ) ಹಾಗೂ ಟಿಸಿ ಆಯಿಲ್ ಸೇರಿ ಒಟ್ಟು 3.85 ಕೋಟಿ ಮೌಲ್ಯದ ಸಾಮಗ್ರಿಗಳ ಲೆಕ್ಕ ತಪ್ಪಿದೆ. 2025ರ ಏಪ್ರಿಲ್ನಲ್ಲಿ ನಡೆದ ತ್ರೈಮಾಸಿಕ ಪರಿಶೀಲನೆಯಲ್ಲಿ ವಂಚನೆ ನಡೆದಿರುವುದು ಪತ್ತೆಯಾಗಿದೆ. ಈ. ವರದಿ ಆಧರಿಸಿ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಬೆಸ್ಕಾಂ ವಿಭಾಗೀಯ ಉಗ್ರಾಣದಲ್ಲಿ ಕೋಟ್ಯಂತರ ಮೌಲ್ಯದ ಸಾಮಗ್ರಿಗಳ ತಪ್ಪಿದ ಲೆಕ್ಕ ಆರೋಪದ ಮೇಲೆ ಸಹಾಯಕ ಉಗ್ರಾಣ ಪಾಲಕ ಅರುಣಕುಮಾರ್ ಜಿ.ಎನ್. ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ.
ಬೆಸ್ಕಾಂಗೆ ಎಷ್ಟು ನಷ್ಟ..?
ಗ್ಯಾರಂಟಿ ಇದ್ದ ಪರಿವರ್ತಕಗಳನ್ನು ದುರಸ್ತಿ ಕೇಂದ್ರಗಳಿಗೆ ಕಳುಹಿಸದೆ, ಇನ್ವಾಯ್ಸ್ ಸಂಖ್ಯೆಗಳನ್ನು ಮಾತ್ರ ಲೆಡ್ಜರ್ನಲ್ಲಿ ದಾಖಲಿಸಿ ವಂಚನೆ ನಡೆಸಿದ ಆರೋಪವಿದೆ. ಆಂತರಿಕ ಲೆಕ್ಕಪರಿಶೋಧಕರು ವರದಿ ಪ್ರಕಾರ ಟಿ.ಸಿ. ಆಯಿಲ್ 89,270 ಲೀಟರ್ ಲೆಕ್ಕ ತಪ್ಪಿದೆ. ಇದರಿಂದ ಬೆಸ್ಕಾಂಗೆ 56,67,864 ರೂ. ನಷ್ಟ ಉಂಟಾಗಿದೆ. ಇದಲ್ಲದೆ, 72.58 ಲಕ್ಷ ಮೌಲ್ಯದ 102 ಪರಿವರ್ತಕಗಳು ಮಾಯವಾಗಿವೆ. ಇನ್ನೂ 12.75 ಲಕ್ಷ ಮೌಲ್ಯದ 21 ಪರಿವರ್ತಕಗಳು ಲೆಡ್ಜರ್ನಲ್ಲಿ ದುರಸ್ತಿದಾರರಿಗೆ ದಾಖಲಾಗಿದ್ದರೂ, ದುರಸ್ತಿದಾರರಿಗೆ ಹಸ್ತಾಂತರವಾಗಿರಲಿಲ್ಲ. ಇದರಿಂದ ಬೆಸ್ಕಾಂಗೆ ಒಟ್ಟು 3.85 ಕೋಟಿ ಮೌಲ್ಯದ ಸಾಮಗ್ರಿಗಳ ವಂಚನೆ ನಡೆದಿದೆ.