ದಾವಣಗೆರೆ: ಪ್ರಯಾಣಿಕರಿದ್ದ ಆಟೋಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಹಿತ ಮೂವರು ಸಾವನ್ನಪ್ಪಿರುವ ದುರ್ಘಟನೆ ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಹಗನವಾಡಿ ಬಳಿ ನಿನ್ನೆ ನಡೆದಿದೆ.
ಅಪಘಾತ ನಡೆದ ಸ್ಥಳದಲ್ಲೇ ನಾಗೇನಹಳ್ಳಿ ಚಂದ್ರಮ್ಮ (65) ಎಂಬುವರು ಸಾವನಪ್ಪಿದ್ದರು. ಗಾಯಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ಫಲಿಸದೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲು ತಡ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯ ಅನಿಲ್‌ಕುಮಾರ್ (19) ಮತ್ತು ಬಸವರಾಜ್ (19) ಸಾವನ್ನಪ್ಪಿರುವವರು. ಕಳೆದ ದಿನ ಸಂಜೆ ಹರಿಹರದಿಂದ ಭಾನುವಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಆಟೋರಿಕ್ಷಾಕ್ಕೆ ಪಕ್ಕದ ರಸ್ತೆಯಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದು, ಹರಿಹರ ಸರ್ಕಾರಿ ಆಸ್ಪತ್ರೆ ಹಾಗೂ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



