ಹರಿಹರ: ಅಮೃತ ಭಾರತ ರೈಲ್ವೆ ನಿಲ್ದಾಣಗಳ ಪುನರ್ ನಿರ್ಮಾಣ ಯೋಜನೆಯಡಿ ಮೈಸೂರು ವಿಭಾಗದ ಹರಿಹರ ರೈಲ್ವೆ ನಿಲ್ದಾಣ ಸೇರಿ ದೇಶದಲ್ಲಿನ 508 ರೈಲ್ವೆ ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡುವ ಕಾಮಗಾರಿಗೆ ಏಕಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.
ಹರಿಹರ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಶಂಕುಸ್ಥಾಪನಾ ಸಮಾರಂಭದ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ದೇಶದ ರೈಲ್ವೆ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು 2023-24ನೇ ಸಾಲಿನಲ್ಲಿ ₹24,470 ಕೋಟಿ ವೆಚ್ಚದಲ್ಲಿ 27 ರಾಜ್ಯಗಳ 508 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 25.20 ಕೋಟಿ ಅನುದಾನದಲ್ಲಿ ಹರಿಹರ ರೈಲ್ವೆ ನಿಲ್ದಾಣ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ಹರಿಹರದಲ್ಲಿ ನಿಲ್ದಾಣದ ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಲಾಗುವುದು. ನಿಲ್ದಾಣದಲ್ಲಿ 12 ಮೀ. ಅಗಲದ ಫುಟ್ ಓವರ್ ಬ್ರಿಡ್ಜ್, 1 ಎಸ್ಕಲೇಟರ್, 1 ಲಿಫ್ಟ್, ಪ್ಲಾಟ್ಫಾರ್ಮ್ ಶೆಲ್ಟರ್, ಗ್ರಾನೈಟ್ ಫ್ಲೋರಿಂಗ್, ನಿರೀಕ್ಷಣಾ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದರು.
ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಹರಿಹರದ ಉತ್ತರ ಭಗದ ಜನರಿಗೆ ಹರಪನಹಳ್ಳಿ ರಸ್ತೆಯ ರೈಲ್ವೆ ಕೆಳ ಸೇತುವೆ ಮೂಲಕವೇ ಹೋಗಬೇಕಿದ್ದು, ಮಳೆಗಾಲದಲ್ಲಿ ನೀರು ತುಂಬಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ. ಭಾಗೀರಥಿ ಕಲ್ಯಾಣ ಮಂಟಪ ಸಮೀಪದ ಹಳೆಯ ಉಚ್ಚಂಗಿದುರ್ಗ ರಸ್ತೆಯಲ್ಲಿ ಕೆಳ ಅಥವಾ ಮೇಲ್ಸೇತುವೆ ನಿರ್ಮಿಸಬೇಕೆಂದು ಸಂಸದರು ಹಾಗೂ ಮೈಸೂರು ವಿಭಾಗದ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿಜಲ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್, ಯಶವಂತ್ರಾವ್ ಜಾಧವ್, ಅಜಿತ್ ಸಾವಂತ್, ಚಂದ್ರಶೇಖರ್ ಪೂಜಾರ್, ಬಾತಿ ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್ ಪಿ.ಎನ್., ತಹಶೀಲ್ದಾರ್ ಪೃಥ್ವಿ ಸಾನಿಕಂ, ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಾ ಅಗರ್ವಾಲ್, ವಿಶ್ವಾಸ್ ಕುಮಾರ್ ಇದ್ದರು.



