ದಾವಣಗೆರೆ: ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಂದ ಕ್ವಿಂಟಲ್ ಗೆ 3846 ರೂ. ದರದಲ್ಲಿ ರಾಗಿ ಖರೀದಿ ಮಾಡಲಿದ್ದು, ಡಿಸೆಂಬರ್ 1ರಿಂದ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಜನವರಿ 1ರಿಂದ ಮಾರ್ಚ್ 31 ರವರೆಗೆ ಖರೀದಿ ಕಾರ್ಯವನ್ನು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನಡೆದ ರಾಗಿ ಬೆಂಬಲ ಬೆಲೆ ಕುರಿತ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಂದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ರಾಗಿಯನ್ನು ಖರೀದಿ ಮಾಡಲಾಗುತ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಗಿಗೆ ರೂ.3846 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ 8 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಅನುಮತಿ ನೀಡಲಾಗಿದ್ದು, ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಲ್ ರಾಗಿಯನ್ನು ಖರೀದಿಸಲು ಅವಕಾಶ ನೀಡಲಾಗಿದೆ ಎಂದರು.
ಖರೀದಿ ಕೇಂದ್ರಗಳಲ್ಲಿ ಜನಜಂಗುಳಿ ಹೆಚ್ಚಾದಾಗ ಇನ್ನೊಂದು ಖರೀದಿ ಕೇಂದ್ರಕ್ಕೆ ಅವಕಾಶ ನೀಡಲಾಗುವುದು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಎ.ಪಿ.ಎಂ.ಸಿ ಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ರಾಗಿಯನ್ನು ಮಾರಾಟ ಮಾಡಲು ಡಿಸೆಂಬರ್ 1 ರಿಂದ ನೊಂದಾಯಿಸಬಹುದು. ಹಾಗೂ ಜನವರಿ 1 ರಿಂದ ಮಾರ್ಚ್ 31 ರವರೆಗೆ ಖರೀದಿ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ರೈತರು ಸರ್ಕಾರದ ಸೌಲಭ್ಯ ಹಾಗೂ ಇನ್‍ಪುಟ್ ಸಬ್ಸಿಡಿಯನ್ನು ಪಡೆಯಲು ತಮ್ಮ ಜಮೀನುಗಳ ಸಂಪೂರ್ಣ ಮಾಹಿತಿಯನ್ನು ಎಫ್‍ಐಡಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ತಿಳಿಸಿದರು.
ರೈತರು ಎಫ್‍ಐಡಿ ನೋಂದಾಯಿಸುವಾಗ ಯಾವುದೇ ಸುಳ್ಳು ಮಾಹಿತಿಗೆ ಅವಕಾಶ ನೀಡಬಾರದು. ಜಗಳೂರು ಖರೀದಿ ಕೇಂದ್ರದಲ್ಲಿ ಪ್ರತಿ ಬಾರಿಯೂ ಸಮಸ್ಯೆಗಳಾಗುತ್ತಿದ್ದು ಅಧಿಕಾರಿಗಳು ಕ್ರಮ ವಹಿಸಬೇಕು. ರೈತರು ತಾವು ಬೆಳೆದಂತಹ ಧಾನ್ಯಗಳನ್ನು ತಾವೇ ನೇರವಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬೇಕು. ಅನ್ಯ ವ್ಯಕ್ತಿಗಳಿಗೆ ಅವಕಾಶ ಮಾಡಿಕೊಡಬಾರದು. ಎಲ್ಲಾ ಖರೀದಿ ಕೇಂದ್ರಗಳಲ್ಲೂ ತಾತ್ಕಾಲಿಕವಾಗಿ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಶಿದ್ರಾಮ್ ಮಾರಿಹಾಳ್, ದಾವಣಗೆರೆ ತಾಲ್ಲೂಕು ತಹಸಿಲ್ದಾರ್ ಡಾ. ಅಶ್ವಥ್ ಎಂ. ಬಿ ಉಪಸ್ಥಿತರಿದ್ದರು.



