ದಾವಣಗೆರೆ: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ(GMIT) ಬಯೋಟೆಕ್ನಾಲಜಿ ಎಂಜಿನಿಯರಿಂಗ್ ವಿಭಾಗದಿಂದ ಎರಡು ದಿನದ “ಜ್ಞಾನ ಧಾರ” ತಾಂತ್ರಿಕ ಸ್ಪರ್ಧಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಎರಡು ದಿನ ನಡೆದ ಸ್ಪರ್ಧೆಗಳಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸ್ಪರ್ಧಾತ್ಮಕ ಹಾಗೂ ತಾಂತ್ರಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ಗುಣಮಟ್ಟ ಹಾಗೂ ಬುದ್ಧಿಮಟ್ಟ ಹೆಚ್ಚುವುದಲ್ಲದೆ ತಾಂತ್ರಿಕ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ವೈ ವಿಜಯಕುಮಾರ್ ತಿಳಿಸಿದರು.
ಪ್ರಸ್ತುತ ಸನ್ನಿವೇಶದಲ್ಲಿ ಕೈಗಾರಿಕೆಗಳು ವಿದ್ಯಾರ್ಥಿಗಳ ತಾಂತ್ರಿಕ ಬುದ್ಧಿ ಮಟ್ಟ ಹಾಗೂ ಕೈಗಾರಿಕಾ ಕೌಶಲ್ಯತೆ ಗಳ ಬಗ್ಗೆ ಹೆಚ್ಚು ಒಲವನ್ನು ಹೊಂದಿವೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಹ ತಮ್ಮ ಪರಿಶ್ರಮದ ಮೂಲಕ ಕೈಗಾರಿಕೆಗೆ ಪೂರಕವಾದ ಜ್ಞಾನವನ್ನು ಸಂಪಾದಿಸಿ ತಮ್ಮನ್ನು ತಾವು ಕೈಗಾರಿಕೆಗಳಿಗೆ ಸಿದ್ಧ ಗೊಳಿಸಬೇಕಾಗಿದೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದರು.
ಕಾರ್ಯಕ್ರಮದ ಸಂಯೋಜಕ ಗಣೇಶ್ ಜಿ ಟಿ, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. ಕಾರ್ಯಕ್ರಮದ ಪ್ರಾರ್ಥನೆಯನ್ನು ಕುಮಾರಿ ಸಂಜನಾ ಬಿ, ಸ್ವಾಗತ ಭಾಷಣವನ್ನು ಅಕ್ಷಯ್ ಜೆ ಎಸ್, ವಂದನಾರ್ಪಣೆಯನ್ನು ಕುಮಾರಿ ಸಾಕ್ಷಿ ಕೆ. ಓ ನೆರವೇರಿಸಿಕೊಟ್ಟರು.



