ದಾವಣಗೆರೆ: ಸಾಕಷ್ಟು ಉದ್ಯೋಗವಕಾಶ ಲಭ್ಯವಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯತೆಯನ್ನು ಬೆಳೆಸಿಕೊಳ್ಳಬೇಕೆಂದು ಜಿ ಎಂ ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ ಶ್ವೇತಾಮರಿಗೌಡರ್ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಕಿವಿ ಮಾತು ಹೇಳಿದರು.
ದಾವಣಗೆರೆ ನಗರದ ಜಿ ಎಂ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಎಂಐಟಿ ತರಬೇತಿ ಮತ್ತು ಉದ್ಯೋಗ ವಿಭಾಗ ಆಯೋಜಿಸಿದ್ದ ಉದ್ಯೋಗ ಮೇಳ 2024 ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಮತ್ತು ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ಲಭ್ಯವಿದ್ದು, ಪೂರ್ಣ ಪ್ರಮಾಣದ ಪ್ರಯತ್ನದಿಂದ ನಿಮ್ಮ ನೆಚ್ಚಿನ ಕಂಪನಿಯ ಉದ್ಯೋಗ ಪಡೆಯಬಹುದಾಗಿದೆ ಎಂದರು.
ಉದ್ಯೋಗ ಮೇಳದಲ್ಲಿ ಒಟ್ಟು 12 ವಿವಿಧ ಕಂಪನಿಗಳು ಭಾಗವಹಿಸಿದ್ದವು. ಮೇಳದಲ್ಲಿ 500 ಕ್ಕೂ ಅಧಿಕ ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಂಡು, ತಮ್ಮ ಹೆಸರನ್ನು ನೋಂದಾಯಿಸಿ ಸಂದರ್ಶನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಂತಿಮವಾಗಿ 208 ಉದ್ಯೋಗ ಆಕಾಂಕ್ಷಿಗಳು ಸಂದರ್ಶನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಂಪನಿಗಳಿಗೆ ಆಯ್ಕೆಯಾದರು ಎಂದು ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದರು.
ಉದ್ಯೋಗ ಮೇಳದಲ್ಲಿ ಎಸ್ ವೀ ರೆಕ್ರುಟ್ಟೆಕ್ ಕಂಪನಿ ಯ ಸಂಸ್ಥಾಪಕರಾದ ಜೀವನ್ ಮತ್ತು ವಿವಿಧ 12 ಕಂಪನಿಗಳ ಮಾನವ ಸಂಪನ್ಮೂಲ ನಿರ್ದೇಶಕರು ಭಾಗವಹಿಸಿ ತಮ್ಮ ಕಂಪನಿಗೆ ಬೇಕಾದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರು.



