ದಾವಣಗೆರೆ: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯವು (GMIT) ಇತ್ತೀಚಿಗೆ ಐಸಿಟಿ ಅಕಾಡೆಮಿ ಜೊತೆ ಕೈಗಾರಿಕಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐಸಿಟಿ ಅಕಾಡೆಮಿ ಭಾರತ ಸರ್ಕಾರದ ಅಡಿಯಲ್ಲಿ ಮತ್ತು ರಾಜ್ಯ ಸರ್ಕಾರಗಳ ಸಹಯೋಗ ಮತ್ತು ಕೈಗಾರಿಕೆಗಳ ಸಹಕಾರದಿಂದ ರೂಪಿತವಾದ ಒಂದು ಲಾಭರಹಿತ ಸಂಸ್ಥೆಯಾಗಿದೆ. ಮುಂದಿನ ಪೀಳಿಗೆಯ ಪ್ರತಿಭೆಗಳನ್ನು ರೂಪಿಸಲು ಈ ಸಂಸ್ಥೆಯು ಜಿಎಂಐಟಿ ಕಾಲೇಜಿನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಈ ಒಡಂಬಡಿಕೆ ಯಿಂದ ಜಿಎಂಐಟಿ ಅನೇಕ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಅವುಗಳಲ್ಲಿ ಕೈಗಾರಿಕೆ ಮತ್ತು ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಚಟುವಟಿಕೆಗಳು, ಮುಂದಿನ ಪೀಳಿಗೆಯ ಅಧ್ಯಾಪಕರು ಗಳನ್ನು ಮತ್ತು ವಿದ್ಯಾರ್ಥಿಗಳನ್ನು ರೂಪಿಸುವ ಬಗ್ಗೆ, ಕೈಗಾರಿಕೆಗಳಿಗೆ ಬೇಕಾದ ಅವಶ್ಯಕತೆಗಳನ್ನು ತರಬೇತಿ ಕೊಡುವುದರ ಮೂಲಕ ವಿದ್ಯಾರ್ಥಿಗಳನ್ನು ಕೈಗಾರಿಕೆಗಳಿಗೆ ಸಿದ್ಧಗೊಳಿಸುವುದು, ಅಧ್ಯಾಪಕರು ಗಳನ್ನು ಮತ್ತು ವಿದ್ಯಾರ್ಥಿಗಳನ್ನು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸುವುದು, ಯುವ ಸಬಲೀಕರಣ ಮತ್ತು ಕೈಗಾರಿಕೋದ್ಯಮಿಗಳನ್ನಾಗಿ ತಯಾರು ಮಾಡುವುದು ಮುಂತಾದವು ಗಳಾಗಿವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತು ಕೈಗಾರಿಕಾ ಕೌಶಲ್ಯಗಳನ್ನು ಹೆಚ್ಚಿಸುವಲ್ಲಿ ಈ ಒಡಂಬಡಿಕೆಯು ಸಹಕಾರಿಯಾಗಲಿದೆ ಮತ್ತು ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗವಕಾಶವನ್ನು ಗಿಟ್ಟಿಸಿಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ಐಸಿಟಿ ಅಕ್ಯಾಡೆಮಿಯ ಕಾಲೇಜಿನ ಸಂಯೋಜಕರು ಮತ್ತು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಟಿಆರ್ ತಿಳಿಸಿದ್ದಾರೆ.
ಇದೇ ಸಮಯದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಪ್ರತಿನಿಧಿ ಶ್ರೀ ವೈ ಯು ಸುಭಾಶ್ಚಂದ್ರ, ಐಸಿಟಿ ಅಕ್ಯಾಡೆಮಿ ದಾವಣಗೆರೆ ವಿಭಾಗದ ಸಂಯೋಜಕರಾದ ಶ್ರೀ ಜಕಉಲ್ಲಾ ಎಂ ಎಸ್, ಮುಂತಾದವರು ಉಪಸ್ಥಿತರಿದ್ದರು.



