ದಾವಣಗೆರೆ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯಿಂದ ಇದೇ 13 ರಿಂದ 16 ರವರೆಗೆ ಗ್ಲಾಸ್ ಹೌಸ್‍ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ನ.13 ರಂದು ಸಂಜೆ ಲೇಸರ್, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದ್ದಾರೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗಾಗಿ ಪ್ರವೇಶವು ಉಚಿತವಾಗಿರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ರೂಪಕ, ಲೇಸರ್ ಶೋ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫಲಪುಷ್ಪ ಪ್ರದರ್ಶನದಲ್ಲಿ ಚಂದ್ರಯಾನ-3, ವಿವಿಧ ಕಲಾತ್ಮಕ ಪುಷ್ಪಗಳ ಪ್ರದರ್ಶನ ಸೇರಿದಂತೆ ಔಷಧಗಿಡಗಳ ಪ್ರದರ್ಶನ, ವಿವಿಧ ಖಾದ್ಯವುಳ್ಳ ಕ್ಯಾಂಟೀನ್‍ಗಳು, ಉತ್ತರ ಕರ್ನಾಟಕ, ಮಲೆನಾಡು, ಮೈಸೂರು ಸೇರಿದಂತೆ ವಿವಿಧ ಭಾಗಗಳ ತಿನಿಸುಗಳು ಇಲ್ಲಿರಲಿವೆ ಎಂದು ತಿಳಿಸಿದ್ದಾರೆ.



