ದಾವಣಗೆರೆ: ಕಿಡಿಗೇಡಿಗಳು ಇಟ್ಟ ಬೆಂಕಿಗೆ ನೋಡ ನೋಡುತ್ತಲೇ ಬಣವೆ ಧಗಧಗನೆ ಹೊತ್ತಿ ಉರಿದಿವೆ. ಬೆಂಕಿಗೆ 150 ಪೆಂಡೆ ರಾಗಿ ಮತ್ತು ಭತ್ತದ ಹುಲ್ಲಿನ ಬಣವೆ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಅಣಬೇರು ಗ್ರಾಮದಲ್ಲಿ ನಡೆದಿದೆ.
ಅಣಬೇರು ಗ್ರಾಮದ ಕುಂಬಾರ ಮಂಜಣ್ಣ ಎಂಬುವವರಿಗೆ ಸೇರಿದ ಹುಲ್ಲಿನ ಬಣವೆ ಸುಟ್ಟು ಹೋಗಿವೆ. ಈ ಬಾರಿ ಬರ ಬಿದ್ದಿದ್ದರಿಂದ ಮಂಜಣ್ಣ ಕಷ್ಟಪಟ್ಟು ಮುಂಗಾರು ಹಂಗಾಮಿನಲ್ಲಿಯೇ ಬೇಸಿಗೆ ಮತ್ತು ಮಳೆಗಾಲಕ್ಕೆ ಆಗುವಷ್ಟು 50 ಪೆಂಡೆ ರಾಗಿ ಹುಲ್ಲು, 100 ಪೆಂಡೆ ಭತ್ತದ ಹುಲ್ಲು ಸಂಗ್ರಹಿಸಿದ್ದರು. ಬೇಸಿಗೆ ತಾಪಮಾನ ಹೆಚ್ಚಾಗಿದ್ದರಿಂದ ನೋಡ ನೋಡುತ್ತಿದ್ದಂತೆ ಬೆಂಕಿ ಜ್ವಾಲೆ ಎಲ್ಲಾ ಬಣವೆಗೆ ಆವರಿಸಿದೆ.
ಯಾರೋ ಕಿಡಿಗೇಡಿಗಳು ಇಟ್ಟ ಬೆಂಕಿಗೆ , ಕಷ್ಟಪಟ್ಟು ಜಾನುವಾರುಗಳಿಗೆ ಸಂಗ್ರಹಿಸಿದ ಮೇವು ಸುಟ್ಟು ಹೋಗಿದೆ ಎಂದು ಮಂಜಣ್ಣ ಅಳಲು ತೋಡಿಕೊಂಡಿದ್ದಾರೆ. ಮೇವು ಕಳೆದುಕೊಂಡ ರೈತನಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.



