ದಾವಣಗೆರೆ: ಸಾಲಬಾಧೆಯಿಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಆನಗೋಡು ಹೋಬಳಿಯ ಹೊನ್ನಾನಾಯ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಲ್ಲಿಕಾರ್ಜುನ್ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಬ್ಯಾಂಕ್ ಹಾಗೂ ಕೈ ಸಾಲ ತೀರಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಂದು ಎಕರೆ ಜಮೀನು ಹೊಂದಿದ್ದ ಮಲ್ಲಿಕಾರ್ಜುನ್ ಅವರು ಸಾಲ ಮಾಡಿ ಬೆಳೆ ಬೆಳೆದಿದ್ದರು. ಕಳೆದ ಮೂರ್ನಾಲ್ಕು ವರ್ಷದಿಂದ ಬೆಳೆ ನಷ್ಟದಿಂದ ಮಾಡಿದ್ದ ಸಾಲ ಕಟ್ಟಲು ಸಾಧ್ಯವಾಗಿರಲಿಲ್ಲ.
ಈ ಬಾರಿಯೂ ಮಳೆ ಅತಿವೃಷ್ಠಿ ಪರಿಣಾಮ ಬೆಳೆ ಹಾಳಾಗಿತ್ತು. ಇದರಿಂದ ಬೇಸತ್ತು ತಂದೆ ಸಾವಿಗೆ ಶರಣಾಗಿದ್ದಾರೆ ಎಂದು ಮೃತನ ಪುತ್ರ ಅಜಯ್ ಪೊಲೀಸರಿಗೆ ತಿಳಿಸಿದ್ದಾರೆ. ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.