ದಾವಣಗೆರೆ: ತಮ್ಮ ಜಮೀನಿಗೆ ಹೋಗಿದ್ದಾಗ ಅಲ್ಲೇ ಇದ್ದ ಟಿಸಿ ಬಳಿಯ ತಂತಿ ಮುಟ್ಟಿದ್ದರಿಂದ ವಿದ್ಯುತ್ ಶಾಕ್ ಹೊಡೆದಿದ್ದು, ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ದಾವಣಗೆರೆ ಬಳಿಯ ಕಾಟೇಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ನಾಗರಾಜ್(35), ಲತಾ(30) ಸ್ಥಳದಲ್ಲೇ ಮೃತಪಟ್ಟ ದಂಪತಿ.ಒಂದುವರೆ ಎಕರೆ ನೀರಾವರಿ ಜಮೀನಿನಲ್ಲಿ ಟೊಮೊಟೊ, ಕೋಸು ಬೆಳೆದಿದ್ದರು.
ಗುರುವಾರ ಬೆಳಗ್ಗೆ ಎಂದಿನಂತೆ ಜಮೀನಿಗೆ ತೆರಳಿದ್ದರು. ಕಳೆದ ರಾತ್ರಿ ಧಾರಾಕಾರವಾಗಿ ಮಳೆ ಸುರಿದು, ಜಮೀನಿನಲ್ಲಿ ನೀರು ನಿಂತಿತ್ತು. ಟಿಸಿ ಹಾಕಿದ್ದ ವಿದ್ಯುತ್ ಕಂಬದ ತಂತಿಗೆ ಕೈ ಮುಟ್ಟಿದ್ದರಿಂದ ವಿದ್ಯುತ್ ಶಾಕ್‌ಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
3ನೇ ತರಗತಿಯ ಸಾನ್ವಿ, ಯುಕೆಜಿ ಓದುತ್ತಿರುವ ಖುಷಿ ಎಂಬ ಇಬ್ಬರು ಪುತ್ರಿಯರನ್ನು ದಂಪತಿಗಳು ಅಗಲಿದ್ದಾರೆ. ತಂದೆ- ತಾಯಿ ಇಬ್ಬರ ಕಳೆದುಕೊಂಡ ಮಕ್ಕಳ ರೋಧನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಮಾಯಗೊಂಡ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ, ಗ್ರಾಮಸ್ಥರಿಂದ ಮಾಹಿತಿ ಪಡೆದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬೆಸ್ಕಾಂ ಮತ್ತು ಪೊಲೀಸರಿಗೆ ಮಾಹಿತಿ ನೀಡಿ ಮೃತದೇಹಗಳ ಶವಾಗಾರಕ್ಕೆ ಸಾಗಿಸಲು ನೆರವಾದರು. ಮಕ್ಕಳಿಗೆ ಪರಿಹಾರ ನೀಡಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.