ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬೆನ್ನಲ್ಲೇ ಜಿಲ್ಲಾ ಬಿಜೆಪಿಯಲ್ಲಿ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪ, ವಿಜಯೇಂದ್ರ, ರೇಣುಕಾಚಾರ್ಯ ಕಾಂಗ್ರೆಸ್ ಅಭ್ಯರ್ಥಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಹರಿಹರ ಬಿಜೆಪಿ ಶಾಸಕ ಹರೀಶ್ ಗಂಭೀರ ಆರೋಪ ಮಾಡಿದ್ದರು. ಇದೀಗ ಇದಕ್ಕೆ ಯಡಿಯೂರಪ್ಪ ಆಪ್ತ ಮಾಜಿ ಸಚಿವ ರೇಣುಕಾಚಾರ್ಯ ಹರೀಶ್ಗೆ ತಿರುಗೇಟು ನೀಡಿದ್ದು ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಬಗ್ಗೆ ಮಾತಾಡಿದ್ರೆ ಸರಿ ಇರಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ನಾವು ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ. ಆದರೆ ಬಿ.ಪಿ.ಹರೀಶ್ ಕ್ಷೇತ್ರದಲ್ಲೇ ಕಾಂಗ್ರೆಸ್ಗೆ ಹೆಚ್ಚು ಮತ ಬಂದಿದೆ. ಇವರಿಗೆ ಸಾಥ್ ನೀಡಲು ಹೆಚ್.ಎಸ್.ಶಿವಶಂಕರ್ ಇದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ರು. ಆದರೆ ಲೋಕಸಭೆ ಚುನಾವಣೆಯಲ್ಲಿ ಕೇವಲ 70 ಸಾವಿರ ಮತ ಬಂದಿದೆ. ತನ್ನ ಕ್ಷೇತ್ರದಲ್ಲೇ ಶಾಸಕ ಬಿ.ಪಿ.ಹರೀಶ್ ಬಿಜೆಪಿಗೆ ಲೀಡ್ ಕೊಟ್ಟಿಲ್ಲ ಕಿಡಿಕಾರಿದರು.
ಇದೇ ವೇಳೆ ಬಿಪಿ ಹರೀಶ್ ವಿರುದ್ಧ ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ವಾಗ್ದಾಳಿ ನಡೆಸಿದ್ದು, ಶಾಸಕ ಬಿಪಿ ಹರೀಶ್ ಮಾನಸಿಕ ಸ್ಥಿಮಿತ ಕಳೆದುಕೊಂಡು ನನ್ನ ಮತ್ತು ತಂದೆ ವಿರುದ್ಧ ಮಾತಾಡುತ್ತಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಮಾಡಿದ್ದಾರೆ. ಅವರಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಸ್ಥಾನ ಗೆದ್ದಿದೆ ಎಂದು ಹೇಳಿದ್ದರು. ನಮ್ಮ ತಂದೆ ವಿರುದ್ದ ಇದ್ದ ಕೇಸ್ ಸಹ ಕೋರ್ಟನಲ್ಲಿ ರದ್ದಾಗಿದೆ. ನಮ್ಮ ಕುಟುಂಬದ ಬಗ್ಗೆ ಮಾತಾಡಲು ಹರೀಶ್ ಯಾರು? ಹರಿಹರದ ಜನ ಅವರಿಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಆ ಕ್ಷೇತ್ರದ ಜನರ ಸೇವೆ ಮಾಡಲಿ. ಅದು ಬಿಟ್ಟು ನಮ್ಮ ಕುಟುಂಬದ ಬಗ್ಗೆ ಟೀಕೆ ಮಾಡಿದ್ರೆ ಚನ್ನಾಗಿರಲ್ಲ ಎಂದು ಆಕ್ರೋಶ ಹೊರ ಹಾಕಿದರು.



