ದಾವಣಗೆರೆ: ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ (90) ಅವರು ಇಂದು (ಮಾ.16) ಸಂಜೆ ನಿಧನ ಹೊಂದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಗರದ ಪಿ.ಜೆ.ಬಡಾವಣೆಯಲ್ಲಿರುವ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನಾಳೆ ಮಧ್ಯಾಹ್ನ 3 ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಾಳೆ (ಮಾ.17) ಪಿ.ಬಿ.ರಸ್ತೆಯ ವೈಕುಂಠಧಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ನಾಗಮ್ಮ ಅವರು 1951ರಲ್ಲಿ ದಾವಣಗೆರೆ ಮೂಲದ ಉದ್ಯಮಿಯ ಪುತ್ರನನ್ನು ವಿವಾಹ ಮಾಡಿಕೊಂಡರು. ಇವರಿಗೆ ಪುತ್ರ ಡಾ. ಜಯಂತ್, ಸೊಸೆ ಹಾಗೂ ಮೊಮ್ಮಗಳು ಇದ್ದಾರೆ.1972, 1978, 1989ರಲ್ಲಿ ಕಾಂಗ್ರೆಸ್ ಶಾಸಕಿಯಾಗಿ ಆಯ್ಕೆಯಾಗಿದ್ದರು. ಗುಂಡೂರಾವ್, ಬಂಗಾರಪ್ಪ, ಮೊಯ್ಲಿ ಸಂಪುಟದಲ್ಲಿ ಸಚಿವೆ ಆಗಿ ಸೇವೆ ಮಾಡಿದ್ದಾರೆ. ಬೃಹತ್ ಕೈಗಾರಿಕೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಾಗೂ ವಿಧಾನಸಭೆಯ ಉಪಸಭಾಪತಿಯಾಗಿ ಸೇವೆ ಸಲ್ಲಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದ ಅವರು, 1 ರಿಂದ 4 ನೇ ತರಗತಿವರೆಗೂ ಕನ್ನಡ ಮಾಧ್ಯಮ ಕಡ್ಡಾಯ ಮಾಡಿದ್ದರು. ಪ್ರಾಥಮಿಕ ಶಾಲಾ ಹಂತದಲ್ಲಿ ಬಾಲಕಿಯರಿಗೆ ಶೇ. 50 ರಷ್ಟು ಮೀಸಲಾತಿ ನೀಡಲು ಕ್ರಮವಹಿಸಿದ್ದರು. ರಾಜ್ಯ ಮಟ್ಟದ, ವಲಯ ಮಟ್ಟದ ಹತ್ತಾರು ಬೊಧಕ ಮಂಡಳಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ವನಿತಾ ಸಮಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದರು. ನಾಗಮ್ಮ ಕೇಶವಮೂರ್ತಿ ನಿಧನಕ್ಕೆ ಜಿಲ್ಲೆಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.



