ದಾವಣಗೆರೆ: ಶಾಮನೂರು ಶಿವಶಂಕರಪ್ಪ ವಿರುದ್ಧ ಮುಸ್ಲಿಂ ಸಮುದಾಯ ಮುನಿಸುಗೊಂಡಿದ್ದು, ಈ ಬಾರಿ ದಾವಣಗೆರೆ ದಕ್ಷಿಣದಿಂದ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಗೆ ಪಟ್ಟು ಹಿಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಕಳೆದ ಬಾರಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಕೊನೆಯ ಚುನಾವಣೆ ಎಂದಿದ್ರು. ಈ ಸಲ ಮುಸ್ಲಿಂ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕು. ದಾವಣಗೆರೆ ದಕ್ಷಿಣದಿಂದ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು ಎಂದು ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಮುದಾಯದ ಮುಖಂಡರಾದ ಮೆಹಬೂಬ್ ಜಬಿ, ಹಜರತ್, ದಾದಾಪೀರ್ ಅವರು, 2018ರಲ್ಲಿ ಶಾಮನೂರು ಶಿವಶಂಕರಪ್ಪ ಅವರು ನನ್ನ ಕೊನೆಯ ಚುನಾವಣೆ ಎಂದಿದ್ರು. ಈಗ ಮಾತಿನಂತೆ ಅವರು ನಡೆದುಕೊಳ್ಳಬೇಕು. ಈ ಬಾರಿ ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದಿದ್ರೆ, ಮತ್ತೊಮ್ಮೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜೆಡಿಎಸ್‌ನ ಅಮಾನುಲ್ಲಾ ಖಾನ್ , ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡಿದರೆ ಕಣದಿಂದ ಹಿಂದೆ ಸರಿಯುವುದಾಗಿ ಘೋಷಸಿದ್ದಾರೆ. ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ 83 ಸಾವಿರದಷ್ಟಿದ್ದು,ಮೊದಲಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದ್ದೇವೆ. ಸಾದಿಕ್ ಪೈಲ್ವಾನ್ ಅವರು ಸುಮಾರು 45 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯಿಸಿದರು.
ಪ್ರತಿ ಸಲ ಚುನಾವಣೆಯಲ್ಲಿಯೂ ನಾವು ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದ್ದೇವೆ. ಮುಸ್ಲಿಂರಿಗೆ ಟಿಕೆಟ್ ಕೊಡಲೇಬೇಕೆಂಬ ಬೇಡಿಕೆ ಇದೆ. ಟಿಕೆಟ್ ಸಿಗದಿದ್ದರೆ ದಾವಣಗೆರೆ ದಕ್ಷಿಣ ಸೇರಿ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಚ್ಚರಿಸಿದರು.
ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಲಾಗುವುದು. ಕ್ಷೇತ್ರದಲ್ಲಿ ಮುಸ್ಲಿಮರೇ ಹೆಚ್ಚು ಮತದಾರರಿದ್ದಾರೆ. ಲಿಂಗಾಯತರು, ಕುರುಬರು, ಎಸ್‌ಸಿ, ಎಸ್‌ಟಿ, ದಲಿತರ ಮತಗಳೂ ಇವೆ. ಹೆಚ್ಚಾಗಿ ನಾವೇ ಇದ್ದು, ಈ ಬಾರಿ ನಮ್ಮ ಸಮುದಾಯಕ್ಕೆ ಟಿಕೆಟ್ ಕೊಟ್ಟರೆ ಜಯಭೇರಿ ಬಾರಿಸುವುದರಲ್ಲಿ ಅನುಮಾನ ಇಲ್ಲ. ಕಾಂಗ್ರೆಸ್ ವರಿಷ್ಠರು ಈ ಬಗ್ಗೆ ನಿರ್ಧಾರ ತಿಳಿಸಬೇಕು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಸೈಯ್ಯದ್ ಅಕ್ಬರ್ ಆಲಿ, ಕೆ. ಜಮಾಲುದ್ದೀನ್ ಇದ್ದರು.