ದಾವಣಗೆರೆ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ದೂಡಾ) ಸೇರಿದ 1.25 ಕೋಟಿ ಅನುದಾನ ದುರ್ಬಳಕೆ ಆಗಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಆರೋಪಿಸಿದರು.
ರಾಮಕೃಷ್ಣ ಹೆಗಡೆ ನಗರದ ವರ್ತುಲ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡ ಗುಡಿಸಲು ತೆರವುಗೊಳಿಸಿ, ಪುನರ್ವಸತಿ ಕಲ್ಪಿಸಲು 2017ರಲ್ಲಿ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಗಾಗಿ ಅಂದಿನ ಕಾಂಗ್ರೆಸ್ ಸರ್ಕಾರದ ತೋಟಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಅವರು ದೂಡಾದಿಂದ ನಿರ್ಗತಿಕ ಕೇಂದ್ರಕ್ಕೆ 1.50 ಕೋಟಿ ಅನುದಾನ ನೀಡಲು ತೀರ್ಮಾನ ಕೈಗೊಂಡಿದ್ದರು. ನಂತರ, ಯೋಜನಾ ಮೊತ್ತವನ್ನು 1.25ಕೋಟಿ ಇಳಿಸಿ ದೂಡಾದಿಂದ ಹಣ ಬಿಡುಗಡೆ ಮಾಡಲಾಗಿದೆ. ಕೇವಲ ಸಾಂಕೇತಿಕವಾಗಿ 20 ಪುನರ್ ವಸತಿ ಶೆಡ್ ನಿರ್ಮಿಸಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದರು.
ಪುನರ್ ವಸತಿ ಕೇಂದ್ರವು ಶೆಡ್ ನಿರ್ಮಾಣ ಬಗ್ಗೆ ಮಹಾನಗರ ಪಾಲಿಕೆ ಹಸ್ತಾಂತರದ ವರದಿ ನೀಡುವಂತೆ ನಿರ್ಮಿತಿ ಕೇಂದ್ರಕ್ಕೆ ಅನೇಕ ಸಲ ದೂಡಾ ಮನವಿ ಮಾಡಿದರು. ನಿರ್ಮಿತಿ ಕೇಂದ್ರ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಈ ಬಗ್ಗೆ ಮಹಾನಗರ ಪಾಲಿಕೆ ಹಾಗೂ ದೂಡಾ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದು, ಸ್ಥಳ ಪರಿಶೀಲನೆ ವೇಳೆ ಯಾವುದೇ ಶೆಡ್ ಗಳು ಇರುವುದಿಲ್ಲ. ಹೀಗಾಗಿ ದೂಡಾದ ಅನುದಾನ ದುರ್ಬಳಕೆ ಆಗಿರುವುದು ಕಂಡು ಬಂದಿದ್ದು, ಈ ಬಗ್ಗೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ದೂಡಾ ನಿರ್ಧರಿಸಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಸಮರ್ಥಿಸಿಕೊಳ್ಳುವ ನಾಯಕರು. ತಮ್ಮದೇ ಸರ್ಕಾರದ ಆಡಳಿತ ಅವಧಿಯಲ್ಲಿ ನಡೆದಿರುವ 1.25 ಕೋಟಿ ಹಣ ದುರ್ಬಳಕೆ ಬಗ್ಗೆ ಏನು ಹೇಳ್ತಾರೆ ಎಂದು ಪ್ರಶ್ನೆ ಮಾಡಿದರು.



