ದಾವಣಗೆರೆ: ಮುಂಗಾರು, ಹಿಂಗಾರು ಮಳೆಯ ಕೊರತೆ ಮತ್ತು ಜಲಾಶಯದಲ್ಲಿ ನೀರಿನ ಸಂಗ್ರಹದ ಕೊರತೆಯ ಕಾರಣದಿಂದ ಸುಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಅಗತ್ಯವಿದ್ದಲ್ಲಿ ಹೊಸ ಕೊಳವೆಬಾವಿ ಕೊರೆಯಿಸಲು ಮತ್ತು ಬಾಡಿಗೆ ಆಧಾರದ ಮೇಲೆ ಕೊಳವೆಬಾವಿಗಳನ್ನ ಪಡೆಯುವ ಮೂಲಕ ಬೇಸಿಗೆ ನಿರ್ವಹಣೆ ಮಾಡಬೇಕಾಗಿದೆ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಅಭಾವ ಇದೆ ಎಂದು ದೂರುಗಳು ಬರಬಾರದು. ಚನ್ನಗಿರಿ, ಜಗಳೂರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ನಿರೀಕ್ಷೆ ಇದ್ದು ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಕೆಲಸ ಮಾಡಬೇಕೆಂದು ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆ ತಾ; ದೊಡ್ಡಬಾತಿ ಗ್ರಾಮದಲ್ಲಿ ಜಿಲ್ಲಾ ಅಡಳಿತ, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ದೊಡ್ಡಬಾತಿ ಹಾಗೂ ಹಳೆಬಾತಿ ಗ್ರಾಮ ಪಂಚಾಯಿತಿಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಂದ ಅಹವಾಲು ಸ್ವೀಕಾರ, ವಿವಿಧ ಸರ್ಕಾರಿ ಸೌಲಭ್ಯಗಳ ವಿತರಣೆ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಪರ, ಅಭಿವೃದ್ದಿ ಪರ ಸರ್ಕಾರ; ಜನಪರ ಹಾಗೂ ಅಭಿವೃದ್ದಿಪರ ಹಾಗೂ ಬಡವರ ಪರವಾದ ಸರ್ಕಾರವಾಗಿದೆ. ಜನರಿಗೆ ಬೇಕಾದ ಆಹಾರ ಧವಸ, ಆರೋಗ್ಯ ರಕ್ಷಣೆ, ಕುಡಿಯುವ ನೀರು ಪೂರೈಕೆ, ವಸತಿ, ಶಿಕ್ಷಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮುನ್ನುಗ್ಗುತ್ತಿದೆ. ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಹೆಚ್ಚುವರಿಯಾಗಿ 100 ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಕಾಡಜ್ಜಿ ಮತ್ತು ಅವರಗೊಳ್ಳಕ್ಕೆ ಹೊಸದಾಗಿ ಪಶು ಆಸ್ಪತ್ರೆ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ಬಾತಿ ಕೆರೆ ಅಭಿವೃದ್ದಿ ಮಾಡಿ ಈ ಭಾಗದ ಹಾಗೂ ಸುತ್ತಮುತ್ತಲಿನ ಜನರಿಗೆ ಮತ್ತು ಗ್ರಾಮಗಳಿಗೆ ನೀರಿನ ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದರು.
ಜನತಾ ದರ್ಶನದ ಅರ್ಜಿಗಳು ಶೇ 98 ರಷ್ಟು ಇತ್ಯರ್ಥ; ಕಡ್ಲೆಬಾಳು ಗ್ರಾಮದಲ್ಲಿ ಮೊದಲ ಜನತಾ ದರ್ಶನ ಕಾರ್ಯಕ್ರಮ ಮಾಡಿದ್ದು ಇಲ್ಲಿ ಸ್ವೀಕರಿಸಲಾದ ಅರ್ಜಿಗಳಲ್ಲಿ ಶೇ 98 ರಷ್ಟು ವಿಲೇ ಮಾಡಲಾಗಿದೆ. ಕೆಲವು ಕೌಟುಂಬಿಕ ಸಮಸ್ಯೆ, ವ್ಯಾಜ್ಯಗಳ ಕಾರಣ ಕೆಲವೊಂದು ಅರ್ಜಿಗಳ ಇತ್ಯರ್ಥ ಮಾಡಲು ಸಾಧ್ಯವಾಗಿಲ್ಲ. ಅಮೃತ ನಗರದಲ್ಲಿ ಅನೇಕ ವರ್ಷಗಳಿಂದ ಮನೆಗಳಿಗೆ ಹಕ್ಕುಪತ್ರಗಳನ್ನು ಕೊಡಲು ಸಾಧ್ಯವಾಗಿರಲಿಲ್ಲ, ಆದರೆ ಈ ಜನತಾ ದರ್ಶನದಲ್ಲಿ ಇತ್ಯರ್ಥ ಮಾಡಿ ಎಲ್ಲಾ ಮನೆ ಮಾಲಿಕರಿಗೆ ಇ-ಸ್ವತ್ತು ದಾಖಲೆ ವಿತರಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ ದೊಡ್ಡಬಾತಿ, ಹಳೆಬಾತಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಮನೆ ಮನೆಗೆ ಭೇಟಿ ನೀಡಿ ಜನರ ಕುಂದುಕೊರತೆಯ ಅಹವಾಲು ಸ್ವೀಕರಿಸಲಾಗಿದೆ. ಎರಡು ಗ್ರಾಮಗಳಿಂದ 908 ಅರ್ಜಿಗಳು ಇಲ್ಲಿಯವರೆಗೆ ಸ್ವೀಕೃತವಾಗಿವೆ. ಜ್ವಲಂತ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ನೀಲನಹಳ್ಳಿ ಗ್ರಾಮದಲ್ಲಿ ಗ್ರಾಮಠಾಣಾ ಅಧಿಸೂಚನೆ ಹೊರಡಿಸಿ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಸಹಕಾರ ಬ್ಯಾಂಕ್ ಮೂಲಕ 89 ಜನರಿಗೆ ಹೈನುಗಾರಿಕೆ ಮಾಡಲು ಹಸು ಕೊಡಿಸಲಾಗಿದೆ ಎಂದ ಅವರು ಜನರಿಂದ ಸ್ವೀಕರಿಸಲಾದ ಕುಂದುಕೊರತೆಗಳನ್ನು ನಿವಾರಿಸುವ ಮೂಲಕ ಜನರಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ ಅಂಗನವಾಡಿ ಕೇಂದ್ರ ನಿರ್ಮಾಣ, ಖಾತರಿಯಡಿ ದನದ ಕೊಟ್ಟಿಗೆ ನಿರ್ಮಾಣ, ಸಚಿವರ ನಿರ್ದೇಶನದಂತೆ ದೊಡ್ಡಬಾತಿ ಗ್ರಾಮದಲ್ಲಿ ಎಲ್ಲ ಕಡೆ ಚರಂಡಿ ನಿರ್ಮಾಣ ಮಾಡಲು ಕ್ರಮ ವಹಿಸಲಾಗುತ್ತದೆ ಎಂದ ಅವರು ಗ್ರಾಮ ಪಂಚಾಯಿತಿ ಸೇವೆಗಳನ್ನು ಇನ್ನು ಮುಂದೆ ವಾಟ್ಸಪ್ ಮೂಲಕ ಪಡೆಯಬಹುದಾಗಿದೆ ಎಂದರು.
ದೊಡ್ಡಬಾತಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುಳಾ.ಡಿ ಇವರು ಅಧ್ಯಕ್ಷತೆ ವಹಿಸಿದ್ದರು. ಹಳೆಬಾತಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೀತಾ ಆರ್, ದೊಡ್ಡಬಾತಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಭಾನುವಳ್ಳಿ ಸಿದ್ದಪ್ಪ, ಹಳೇಬಾತಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪುಷ್ಪ ಎ, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಕರಿಬಸಪ್ಪ, ಗಿರೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಉಪವಿಭಾಗಾಧಿಕಾರಿ ದುರ್ಗಾಶ್ರೀ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿ ತಾಯಂದಿರುಗಳಿಗೆ ಸೀಮಂತ, ವಿಕಲಚೇತನರಿಗೆ ಸಾಧನಾ ಸಲಕರಣೆ, ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ, ನಿವೇಶನ ಹಕ್ಕುಪತ್ತ ವಿತರಣೆ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ವಿತರಿಸಲಾಯಿತು. ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞೆ ಸ್ವೀಕರಿಸಲಾಯಿತು.