ದಾವಣಗೆರೆ: ನ್ಯಾಯಬೆಲೆ ಅಂಗಡಿ ಅಕ್ರಮದ ವಿರುದ್ಧ ಹೋರಾಡಿ, ನ್ಯಾಯ ಸಿಗದಿದ್ದಕ್ಕೆ ಮನನೊಂದು ಸಾಲುಮರ ವೀರಾಚಾರಿ ನೇಣಿಗೆ ಶರಣಾಗಿದ್ದಾರೆ. ಹೀಗಾಗಿ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಜಿಲ್ಲಾ ವಿಶ್ವಕರ್ಮ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ವಿ. ಶಿವಾನಂದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ವೀರಾಚಾರಿಯವರ ನಿಧನ ತುಂಬಲಾರದ ನಷ್ಟ. ಸಾವಿರಾರು ಗಿಡಗಳನ್ನು ನೆಟ್ಟು ಸಂರಕ್ಷಿಸಿ ಖ್ಯಾತಿಯಾಗಿದ್ದರು. ಈಗ ಅವರ ಸಾವು ಕುಟುಂಬಕ್ಕೆ ತುಂಬಲಾರದ ನಷ್ಟ. ಹೀಗಾಗಿ ಅವರ ಕುಟುಂಬಕ್ಕೆ ಪರಿಹಾರ ಜತೆ ಸದಸ್ಯರೊಬ್ಬರಿಗೆ ಕೆಲಸ ನೀಡಬೇಕು. ಮಿಟ್ಲಕಟ್ಟೆ ಗ್ರಾಮದ ಮುಖ್ಯರಸ್ತೆಯ ಸರ್ಕಲ್‌ಗೆ ವೀರಾಚಾರಿಯವರ ಪ್ರತಿಮೆ ಮಾಡಿ ಉದ್ಯಾನವನ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಮಿಟ್ಲಕಟ್ಟೆ ವೀರಾಚಾರಿ ಅವರು ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುತ್ತಿದ್ದ ಅಕ್ರಮವನ್ನು ಕಂಡು ಮಾಲೀಕನ ವಿರುದ್ಧ ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಅಶಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳ ಉದಾಸೀನತೆ ಪರಿಸರ ಪ್ರೇಮಿ ಕಳೆದುಕೊಂಡಿದ್ದೇವೆ ಎಂದರು.
ಸರ್ಕಾರದ ಪುರಸ್ಕೃತರಿಗೆ ಈ ರೀತಿಯ ಕಾನೂನು ವಂಚನೆಯಾದರೆ ಸಾರ್ವಜನಿಕರ ಗತಿ ಏನು? ತಪ್ಪಿತ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದರು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರು ಇದ್ದರು

 
		 
		 
		 
		 
		 
			
 
                                
                             
