Connect with us

Dvgsuddi Kannada | online news portal | Kannada news online

ದಾವಣಗೆರೆ: ದೂಡಾದಿಂದ 50 ಎಕರೆಯಲ್ಲಿ ನೂತನ ಬಡಾವಣೆ ನಿರ್ಮಿಸಿ ಬಡವರು, ಮಧ್ಯಮ ವರ್ಗಕ್ಕೆ ನಿವೇಶನ ಹಂಚಿಕೆ ; ನೂತನ ಅಧ್ಯಕ್ಷ ದಿನೇಶ್ ಶೆಟ್ಟಿ

ದಾವಣಗೆರೆ

ದಾವಣಗೆರೆ: ದೂಡಾದಿಂದ 50 ಎಕರೆಯಲ್ಲಿ ನೂತನ ಬಡಾವಣೆ ನಿರ್ಮಿಸಿ ಬಡವರು, ಮಧ್ಯಮ ವರ್ಗಕ್ಕೆ ನಿವೇಶನ ಹಂಚಿಕೆ ; ನೂತನ ಅಧ್ಯಕ್ಷ ದಿನೇಶ್ ಶೆಟ್ಟಿ

ದಾವಣಗೆರೆ: ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ) ದಿಂದ 50 ಎಕರೆಯಲ್ಲಿ ನೂತನ ಬಡಾವಣೆ ನಿರ್ಮಿಸಿ ಬಡವರು, ಮಧ್ಯಮ ವರ್ಗದ ಜನರಿಗೆ ನಿವೇಶನ ನೀಡಲಾಗುವುದು ನೂತನ ಅಧ್ಯಕ್ಷ ದಿನೇಶ್ ಶೆಟ್ಟಿ ಹೇಳಿದರು‌

ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಸಮ್ಮುಖದಲ್ಲಿ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಅಧಿಕಾರ ಸ್ವೀಕರಿಸಿದರು.

ಇದೇ ವೇಳೆ ಮಾತನಾಡಿದ ದಿನೇಶ ಕೆ. ಶೆಟ್ಟಿ ಅವರು, ಸಾಮಾನ್ಯ ಕಾರ್ಯಕರ್ತರನ್ನು ಕಾಂಗ್ರೆಸ್‌ ದೂಡಾ ಅಧ್ಯಕ್ಷನನ್ನಾಗಿ ಮಾಡಿದೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ. ಬೇರೆ ಪಕ್ಷಗಳಲ್ಲಿ ಬೇರೆ ಪಕ್ಷದಿಂದ ಬಂದವರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದರು.

ದಾವಣಗೆರೆ ಮಹಾನಗರ ಒಂದೇ ಕಡೆ ಬೆಳೆಯುವುದಕ್ಕಿಂತ ನಾಲ್ಕೂ ದಿಕ್ಕಿನಲ್ಲೂ ಅಭಿವೃದ್ಧಿಯಾಗಬೇಕು. ಇದಕ್ಕಾಗಿ ದೂಡಾದಿಂದ 50 ಎಕರೆ ಜಾಗ ಖರೀದಿಸಿ ಬಡವರು, ಮಧ್ಯಮ ವರ್ಗ, ವಿಶೇಷವಾಗಿ ಆಟೋ ರಿಕ್ಷಾ ಚಾಲಕರು, ಖಾಸಗಿ ಬಸ್‌ ಚಾಲಕರು, ಚಿತ್ರ ಮಂದಿರಗಳ ಕೆಲಸಗಾರರಿಗೆ ಪ್ರಾಧಿಕಾರದಿಂದ ನಿವೇಶನ ನೀಡುತ್ತೇವೆ. ಪ್ರಾಧಿಕಾರ ದಾವಣಗೆರೆ ನಗರಕ್ಕಷ್ಟೇ ಸೀಮಿತವಲ್ಲ. ಹರಿಹರ ನಗರದಲ್ಲೂ ಉತ್ತಮ ಬಡಾವಣೆ ನಿರ್ಮಾಣ ಮಾಡುತ್ತೇವೆ. ಎಲ್ಲರ ಸಹಕಾರದಲ್ಲಿ ಬಡ, ಮಧ್ಯಮ ವರ್ಗಕ್ಕೆ ಕಡಿಮೆ ದರದಲ್ಲಿ ನಿವೇಶನ ನೀಡಲು ವ್ಯವಸ್ಥೆ ಮಾಡುತ್ತೇವೆ ಎಂದರು.

ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಕಾಂಗ್ರೆಸ್ಸಿನಲ್ಲಿ ಸಾಮಾನ್ಯ ಕಾರ್ಯಕರ್ತರಾದ ದಿನೇಶ ಶೆಟ್ಟಿಗೆ ದೂಡಾ ಅಧ್ಯಕ್ಷರಾಗಿ ಮಾಡಲಾಗಿದೆ. ಬಿಜೆಪಿಯವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋದವರಿಗೆ, ಕರೆದುಕೊಂಡು ಅಧ್ಯಕ್ಷರನ್ನಾಗಿ ಮಾಡಿದ್ದರು. ನಾವು ಖದೀಮ ಕೆಲಸ ಮಾಡುವುದಿಲ್ಲ. ಈ ಹಿಂದೆ ದೂಡಾ ಅಧ್ಯಕ್ಷರಾಗಿದ್ದವರು ಹೆಂಡತಿ, ತಂಗಿ ಹೆಸರಿಗೆ ನಿವೇಶನ ಪಡೆದು, ನಂತರ ತಮ್ಮ ಹೆಸರಿಗೆ ಮಾಡಿಕೊಂಡು, ದೊಡ್ಡ ಕಟ್ಟಡ ಕಟ್ಟಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಬಡವರು, ಮಧ್ಯಮ ವರ್ಗದವರು, ಶ್ರಮಿಕರಿಗೆ ಕಡಿಮೆ ದರದಲ್ಲಿ ನಿವೇಶನ ನೀಡುವಂತಹ ಒಳ್ಳೆಯ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ. ನಾವು ಸಹ ಎಲ್ಲ ರೀತಿಯ ಸಹಕಾರ, ಮಾರ್ಗದರ್ಶನ ನೀಡುತ್ತೇವೆ ಎಂದರು

ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ ಮಾತನಾಡಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಬಾಲ್ಯದಿಂದಲೂ ಕ್ರೀಡಾಪಟು. ದಾವಣಗೆರೆ, ಹರಿಹರ ಅವಳಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹ ಕ್ರೀಡಾ ಮನೋಭಾವದೊಂದಿಗೆ, ಯಾವುದೇ ಪಕ್ಷ ಬೇಧವಿಲ್ಲದೇ ಎಲ್ಲ ಸದಸ್ಯರ ಸಹಕಾರದಲ್ಲಿ ಮಾಡಲಿ. ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.
ಹಿರಿಯ ಉದ್ಯಮಿಗಳಾದ ಅಣಬೇರು ರಾಜಣ್ಣ, ಅಥಣಿ ಎಸ್. ವೀರಣ್ಣ, ಎಸ್.ಕೆ.ವೀರಣ್ಣ, ಉದ್ಯಮಿ ಉದಯ ಶಿವಕುಮಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ದೂಡಾದ ನೂತನ ನಾಮ ನಿರ್ದೇಶಿತ ಸದಸ್ಯರಾದ ಎಂ.ಆರ್.ವಾಣಿ ಬಕ್ಕೇಶ ನ್ಯಾಮತಿ, ಎಂ.ಮಂಜುನಾಥ ತಕ್ಕಡಿ, ಹರಿಹರದ ಎಚ್‌.ಜಬ್ಬಾರ್ ಖಾನ್‌, ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ, ವಿಶೇಷ ಭೂ ಸ್ವಾಧೀನಾಧಿಕಾರಿ ಎಸ್.ರವಿ ಇತರರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top