ದಾವಣಗೆರೆ: ಕುಂದುವಾಡ ಬಳಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ಧೂಡಾ) ಅಭಿವೃದ್ಧಿಪಡಿದಲು ಮುಂದಾಗಿರುವ ಹೊಸ ಬಡಾವಣೆಗೆ ಇಲ್ಲಿನ ರೈತರು ಜಮೀನು ಕೊಡಲು ಒಪ್ಪದಿದ್ದರೆ, ಬೇರೆ ಕಡೆ ಜಮೀನು ಖರೀದಿಸಲಾಗುವುದು ಎಂದು ನೂತನ ಅಧ್ಯಕ್ಷ ಎ.ವೈ. ಪ್ರಕಾಶ್ ಹೇಳಿದರು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ಧೂಡಾ) ಕಚೇರಿಯಲ್ಲಿ ನೂತನ ಅಧ್ಯಕ್ಷರಾಗಿ ಎ.ವೈ. ಪ್ರಕಾಶ್ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಬಾತಿ ಕೆರೆ, ಟಿವಿ ಸ್ಟೇಷನ್ ಕೆರೆ ಅಭಿವೃದ್ಧಿ, ಕುಂದವಾಡ ಗ್ರಾಮದ ಸಮೀಪ ರೈತರಿಗೆ ಭೂಮಿ ಖರೀದಿಗೆ ಪ್ರಕ್ರಿಯೆ ನಡೆಯುತ್ತಿದೆ. ರೈತರಿಗೆ ಏನಾದರೂ ಅಸಮಾಧಾನವಿದ್ದರೆ ಮಾತುಕತೆ ಮೂಲಕ ಬಗೆಹರಿಸಲಾಗುವುದು. ಅಡೆತಡೆಗಳನ್ನು ಸರ್ಕಾರದ ಮಟ್ಟದಲ್ಲಿ ನಿವಾರಿಸಲಾಗುವುದು. ರೈತರು ಭೂಮಿ ಕೊಡಲು ಒಪ್ಪದಿದ್ದರೆ ಹೊರವಲಯದಲ್ಲಿ ಬೇರೆ ಕಡೆ ಜಮೀನು ಗುರುತಿಸಲಾಗುವುದು ಎಂದರು.
ರಿಂಗ್ ರಸ್ತೆಯ ಫ್ಲೈಓವರ್ ನಿರ್ಮಾಣಗೊಂಡ ಮೇಲೆ ಧೂಡಾ ಕಚೇರಿಗೆ ಜಾಗ ಸಾಕಾಗುತ್ತಿಲ್ಲ. ಯಾವುದಾದರೂ ಸಿಎ ನಿವೇಶನ ಗುರುತಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲು ಕ್ರಮ ವಹಿಸುತ್ತೇನೆ.ಅಧಿಕಾರಾವಧಿ ಕಡಿಮೆ ಇದೆ. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲಾಗು ವುದು ಎಂದರು.
ಬಿಜೆಪಿ ಪಕ್ಷಕ್ಕೆ 32 ವರ್ಷದಿಂದ ದುಡಿದಕ್ಕೆ ಪ್ರತಿಫಲ ಸಿಕ್ಕಿದೆ. ಪಕ್ಷದ ಮುಖಂಡರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದರು. ಈ ಸಂದರ್ಭದಲ್ಲಿ ಧೂಡಾ ಸದಸ್ಯರಾದ ಲಕ್ಷ್ಮಣ, ಗೌರಮ್ಮ, ಮಾರುತಿರಾವ್ ಘಾಟ್ಗೆ, ಬಾತಿ ಚಂದ್ರಶೇಖರ್, ಆಯುಕ್ತ ಬಿ.ಟಿ.ಕುಮಾರಸ್ವಾಮಿ, ಪಾಲಿಕೆ ಸದಸ್ಯೆ ಉಮಾ ಪ್ರಕಾಶ್ ಇದ್ದರು.



