ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ದಿ ಯೋಜನೆ ವ್ಯಾಪ್ತಿಯಲ್ಲಿನ ಅಖ್ತರ್ ರಜ್ಹಾ ಸರ್ಕಲ್‍ನಿಂದ ಸರ್ ಮಿರ್ಜಾ ಇಸ್ಮಾಯಿಲ್ ನಗರದ ಮೂಲಕ ಮಗಾನಹಳ್ಳಿ ರಸ್ತೆ ಸಂಪರ್ಕಿಸುವ 120 ಅಡಿ ರಸ್ತೆ ಕಾಮಗಾರಿಯ ಟೆಂಡರ್ ನ್ನು 15 ದಿನಗಳಲ್ಲಿ ಅಂತಿಮಗೊಳಿಸಿ ಕೆಲಸ ಆರಂಭಿಸುವಂತೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ (davangere dhuda) ಕಚೇರಿಯಲ್ಲಿ ನಡೆದ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 120 ಅಡಿ ಅಗಲದ ರಸ್ತೆ 300 ಮೀಟರ್ ಮಾತ್ರ ನಿರ್ಮಾಣ ಬಾಕಿ ಇದ್ದು ಇದರಿಂದ ವರ್ತುಲ ರಸ್ತೆಯಲ್ಲಿ ಬರುವ ವಾಹನಗಳಿಗೆ ತೊಂದರೆಯಾಗಿದೆ. ಈ ರಸ್ತೆ ನಿರ್ಮಾಣವಾದಲ್ಲಿ ನಗರದೊಳಗಿನ ವಾಹನ ದಟ್ಟಣೆ ಕಡಿಮೆಯಾಗಲಿದ್ದು ಜನರಿಗೂ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.
ಈ ವೇಳೆ ಪ್ರಾಧಿಕಾರದ ಅಧಿಕಾರಿಗಳು ತಾಂತ್ರಿಕ ಬಿಡ್ ಪರಿಶೀಲಿಸಿ ಆರ್ಥಿಕ ಬಿಡ್ ತೆರೆಯಲು ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಸಲಾಗಿದ್ದು ಸರ್ಕಾರದ ಹಂತದಲ್ಲಿದ್ದು 15 ದಿನಗಳೊಳಗಾಗಿ ಅನುಮೋದನೆ ಪಡೆದು ಕಡಿಮೆ ಬಿಡ್ ಮಾಡಿದ ಗುತ್ತಿಗೆದಾರರಿಗೆ ಸಾಮಥ್ರ್ಯವನ್ನಾಧರಿಸಿ ಟೆಂಡರ್ ಅಂತಿಮಗೊಳಿಸಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದರು.
ನಗರದ ಪ್ರಮುಖ ರಸ್ತೆ ಮಾರ್ಗಗಳಲ್ಲಿ ನಿವೇಶನಗಳು ಇರುವುದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದ್ದು ಅಂತಹ ಸ್ಥಳಗಳಿಗೆ ಸೂಕ್ತವಾದ ಪರಿಹಾರ ಅಥವಾ ಬದಲಿ ಸ್ವತ್ತನ್ನು ನೀಡಿ ಸ್ವಾಧೀನ ಮಾಡಿಕೊಂಡು ಸಾರ್ವಜನಿಕ ಹಿತದೃಷ್ಟಿಯಿಂದ ಅಭಿವೃದ್ದಿ ಮಾಡಲು ಸಭೆ ಅನುಮೋದನೆ ನೀಡಿತು.
ಪಿತ್ರಾರ್ಜಿತ ಸ್ವತ್ತುಗಳಿಗೆ ವಿಳಂಬವಿಲ್ಲದೆ ಅನುಮೋದನೆ ನೀಡಿ; ಕುಟುಂಬದ ಆಸ್ತಿಯಲ್ಲಿ ಪಾಲುದಾರಿಕೆಯಡಿ ಚಿಕ್ಕ ಚಿಕ್ಕ 10-5 ಗುಂಟೆಗಳಲ್ಲಿ ನಿವೇಶನ ವಿಂಗಡನೆ ಮಾಡಿಕೊಳ್ಳುವವರಿಗೆ ಅನಾವಶ್ಯಕವಾಗಿ ತೊಂದರೆಯಾಗದಂತೆ ನಿಯಮಬದ್ದವಾಗಿ ಶೀಘ್ರವಾಗಿ ಅನುಮತಿ ನೀಡಲು ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.
ಠೇವಣಿಗೆ ಟೆಂಡರ್; ಪ್ರಾಧಿಕಾರದಲ್ಲಿನ ಉಳಿತಾಯದ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಠೇವಣಿಯನ್ನಾಗಿಡಲು ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‍ಗಳಲ್ಲಿ ಹಣವಿರಿಸಲು ಟೆಂಡರ್ ಮೂಲಕ ಅಂತಿಮಗೊಳಿಸಲು ಸಭೆಯು ಅನುಮೋದನೆ ನೀಡಿತು.
ಸಭೆಯಲ್ಲಿ ಶಾಸಕರಾದ ಕೆ.ಎಸ್.ಬಸವಂತಪ್ಪ, ಬಿ.ಪಿ.ಹರೀಶ್, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಅಧ್ಯಕ್ಷರಾದ ಡಾ; ವೆಂಕಟೇಶ್ ಎಂ.ವಿ, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಪ್ರಾಧಿಕಾರದ ಆಯುಕ್ತರಾದ ಹುಲಿಮನಿ ತಿಮ್ಮಣ್ಣ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.



