ದಾವಣಗೆರೆ: ಧಾರವಾಡ ಹೊರ ವಲಯದಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ಕುಟುಂಬ ಸದಸ್ಯರು ಹಾಗೂ ಹುಬ್ಬಳ್ಳಿ ಧಾರವಾಡ ನಾಗರಿಕರ ಸುರಕ್ಷತಾ ವೇದಿಕೆ ವತಿಯಿಂದ ಆಡಳಿತ ವರ್ಗದ ದಿವ್ಯ ನಿರ್ಲಕ್ಷ್ಯದ ಬಗ್ಗೆ ಜಾಗೃತಿ ಮೂಡಿಸಲು ಫೆ . 06 ರಂದು ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಫೆ. 06 ರಂದು ಬೆಳಿಗ್ಗೆ 7 ಗಂಟೆಗೆ ದಾವಣಗೆರೆ ನಗರದ IMA ಹಾಲ್ ನಿಂದ ಅಪಘಾತ ಸ್ಥಳಕ್ಕೆ ಜಾಥ ಕೈಗೊಳ್ಳಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿ ಮೃತ ಆತ್ಮಕ್ಕೆ ಶಾಂತಿ ಕೋರುವ ಕಾರ್ಯಕ್ರಮ ನಡೆಯುವುದು. ನಂತರ ಸರ್ಕಾರದ ವೈಫಲ್ಯದ ವಿರುದ್ಧ ಹಾಗೂ ಇಂತಹ ದುರ್ಘಟನೆಗಳು ಮರುಕಳಿಸದಂತೆ ಅಲ್ಲಿನ ಪೊಲೀಸ್, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಜತೆಗೆ ಘಟನೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ನೊಂದ ಕುಟುಂಬದ ಡಾ. ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಕಳೆದ 25 ವರ್ಷದಿಂದಲ್ಲೂ ಈ ರಸ್ತೆಯಲ್ಲಿ ಇಂತಹ ಅಪಘಾತಗಳು ಸಾಮಾನ್ಯವಾಗಿವೆ. ಎಲ್ಲ ಕಡೆ 6 ಪಥದ ರಾಷ್ಟ್ರೀಯ ಹೆದ್ದಾರಿಗಳಿದ್ದರೂ, ಈ ಭಾಗದಲ್ಲಿ ಮಾತ್ರ ಇನ್ನೂ 2 ಪಥದ ಹೆದ್ದಾರಿ ಇದೆ. ಈ ಸಮಸ್ಯೆ ಸರಿಪಡಿಸಬೇಕಾದ ಸರ್ಕಾರಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿವೆ. ಇದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸ್ಥಳೀಯ ಸಂಘಟನೆಗಳ ಜೊತೆಗೂಡಿ ಅರಿವು ಮೂಡಿಸುವ ಕಾರ್ಯ ನೆರವೇರಿಸಲಾಗುವುದು ಎಂದು ಡಿವಿಜಿಸುದ್ದಿಗೆ ನೊಂದ ಕುಟುಂಬದ ಡಾ. ರಮೇಶ್ ತಿಳಿಸಿದರು.



