ದಾವಣಗೆರೆ: ಬಸವ ಜಯಂತಿಯಂದೇ ಭೀಕರ ದುರುಂತವೊಂದು ಜಿಲ್ಲೆಯಲ್ಲಿ ನಡೆದಿದೆ. ಬಿಸಿಲಿನ ತಾಪಮಾನ ತಾಳಲಾರದೇ ತುಂಗಭದ್ರ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿಂದು ನಡೆದಿದೆ.
ಸಹೋದರರಾದ ಕಿರಣ್, ವರುಣ್ ಹಾಗೂ ಪವನ್ ಸಾವನ್ನಪ್ಪಿದ ಯುವಕರಾಗಿದ್ದಾರೆ. ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ಯುವಕರು ತುಂಗಭದ್ರಾ ನದಿಗೆ ಈಜಲು ತೆರಳಿದ್ದರು. ಆಳವಾದ ಗುಂಡಿ ತಿಳಿಯದ ಯುವಕರು ನೀರಿಗಿಳಿದು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನದಿ ದಡದಲ್ಲಿದ್ದ ಯುವಕರ ಬಟ್ಟೆ ಗಮನಿಸಿದ ಸ್ಥಳೀಯರು ಯುವಕರ ಗುರುತನ್ನು ಪತ್ತೆ ಮಾಡಿದ್ದಾರೆ.
ಈ ದುರ್ಘಟನೆ ನಡೆದ ತಕ್ಷ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಯುವಕರ ಮೃತದೇಹಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ನೀರುಪಾಲಾದ ಮೂವರಲ್ಲಿ ವರುಣ್ ಮೃತದೇಹ ಮಾತ್ರ ಪತ್ತೆಯಾಗಿದೆ. ಇನ್ನೂ ಇಬ್ಬರು ಯುವಕರ ಮೃತದೇಹಗಳ ಪತ್ತೆಗೆ ಶೋಧಕಾರ್ಯ ಮುಂದುವರೆದಿದೆ.
ವಯಸ್ಸಿಗೆ ಬಂದ ಮಕ್ಕಳನ್ನು ಕಳೆದುಕೊಂಡ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಶಾಸಕ ಎಂ.ಪಿ. ರೇಣುಕಾಚಾರ್ಯ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.



