ದಾವಣಗೆರೆ; ಹೊನ್ನಾಳಿ ಬಳಿ ತುಂಗಾಭದ್ರಾ ನದಿಯಲ್ಲಿ ಶಿಕ್ಷಕಿ ಅನುಮಾಸ್ಪದ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ನದಿಯಲ್ಲಿ ಕಾಲು ತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮನೆಗಾಗಿ ಸಾಲ ಮಾಡಿದ್ದು, ಫೈನಾನ್ಸ್ ಕಿರುಕುಳದಿಂದ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದ ಪತಿ ಹಾಲೇಶ್, ಈಗ ನದಿಯಲ್ಲಿ ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
ಶಿಕ್ಷಕಿಯ ಮೃತ ದೇಹ ಹೊನ್ನಾಳಿ ಪಟ್ಟಣದ ಪಂಪ್ ಹೌಸ್ ಬಳಿ ಇಂದು (ಜ.28) ಬೆಳಿಗ್ಗೆ ಪತ್ತೆಯಾಗಿದೆ. ಪತ್ನಿಯ ಸಾವು ಆಕಸ್ಮಿಕವಾಗಿ ಆಗಿದೆ. ಸಾವಿನ ಬಗ್ಗೆ ಬೇರೆ ಯಾವುದೇ ರೀತಿಯ ಅನುಮಾನ ಇಲ್ಲ ಎಂದಿದ್ದು, ಪ್ರಕರಣ ದಾಖಲಿಸಿಕೊಂಡ ಮಾಹಿತಿ ಆಧರಿಸಿ ಪೊಲೀಸ್ ವಿಚಾರಣೆ, ತನಿಖೆ ಮುಂದುವರಿದಿದೆ.
ಹಾವೇರಿ ಜಿಲ್ಲೆಯ ತುಮ್ಮಿನಕಟ್ಟೆ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕಿ ಪುಷ್ಪಲತಾ (46) ಮೃತಪಟ್ಟವರು. ಪತಿ ಸಹ ಚಿಕ್ಕೆರೂರಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದಾರೆ. ಇವರು ಹೊನ್ನಾಳಿ ಹೊಸ ಮನೆ ಸಹ ನಿರ್ಮಿಸಿದ್ದರು.