ದಾವಣಗೆರೆ: ಪ್ರತಿಯೊಬ್ಬ ವಿದ್ಯಾರ್ಥಿ ಮಹತ್ವಾಕಾಂಕ್ಷೆಯ ಕನಸು ಕಾಣಬೇಕು, ಕಂಡ ಕನಸು ನಮ್ಮನ್ನು ಮಲಗಲು ಬಿಡಬಾರದು. ಮಹತ್ವಕಾಂಕ್ಷೆಯ ಕನಸು ಸಾಕಾರಗೊಳ್ಳಲು ಪರಿಶ್ರಮದ ಜೊತೆಗೆ, ಅದನ್ನು ಸಾಧಿಸುವ ಛಲ ಬೆಳೆಸಿಕೊಳ್ಳಬೇಕು. ಸ್ವಾವಲಂಬನೆ, ಸ್ವಾಭಿಮಾನ, ಆತ್ಮಗೌರವ ಸಾಧಿಸಿಕೊಳ್ಳಬೇಕು, ಇವುಗಳನ್ನು ಪಡೆಯಲು ಶ್ರದ್ಧೆ, ಸಮರ್ಪಣೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳಬೇಕು. ಇವು ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳ ಮನಸುಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಬಿತ್ತಿದ ನುಡಿಗಳು.
ಎಸ್‍ಎಸ್‍ಎಲ್‍ಸಿ, ಪಿಯುಸಿ ಫಲಿತಾಂಶ ಸುಧಾರಣೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ನ್ಯಾಮತಿ ತಾಲ್ಲೂಕಿನ ಬೆಳಗುತ್ತಿ-ಮಲ್ಲಿಗೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬುಧವಾರ ಏರ್ಪಡಿಸಿದ ‘ಕನಸು ಬಿತ್ತುವ ಕೆಲಸ-ರಾಷ್ಟ್ರ ಕಟ್ಟುವ ಕೆಲಸ’ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಯಾವುದೇ ಕ್ಷೇತ್ರದಲ್ಲಾಗಲಿ, ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕು ಎಂದರು. ಪ್ರತಿಯೊಬ್ಬರಲ್ಲೂ ಅಗಾಧ ಶಕ್ತಿ ಇರುತ್ತದೆ, ಕಷ್ಟ ಪಡುವವರೇ ಜೀವನದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ. 16 ರಿಂದ 22 ರೊಳಗಿನ ವಯಸ್ಸು ಕಂಡ ಕನಸನ್ನು ಸಾಕಾರಗೊಳಿಸಿಕೊಳ್ಳುವ ಪರಿಪಕ್ವವಾದ ಅವಧಿಯಿದು. ಯಾರೂ ಕೂಡ ಸಣ್ಣ ಮಟ್ಟದ ಕನಸು ಕಾಣಬೇಡಿ, ನಾವು ಕಾಣುವ ಕನಸು ಹೇಗಿರಬೇಕು ಎಂದರೆ, ಅದು ನಮ್ಮನ್ನು ಮಲಗಲು ಬಿಡಬಾರದು. ಪ್ರತಿಯೊಬ್ಬರೂ ಮಹತ್ವಾಕಾಂಕ್ಷೆ ಹೊಂದಿರಿ, ಕನಸು ಕಂಡು ಸುಮ್ಮನಾಗುವುದಲ್ಲ, ಅದನ್ನು ಸಾಧಿಸುವವರೆಗೂ, ಗುರಿ ತಲುಪುವವರೆಗೂ ವಿರಮಿಸಬೇಡಿ. ನಕಾರಾತ್ಮಕ ಭಾವನೆ ಹೊಂದುವುದು ಒಳ್ಳೆಯದಲ್ಲ, ಆದಷ್ಟು ಧನಾತ್ಮಕವಾಗಿ ಚಿಂತಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಅವರು, ‘ಕನಸು ಬಿತ್ತುವ ಕೆಲಸ-ರಾಷ್ಟ್ರ ಕಟ್ಟುವ ಕೆಲಸ’ ಕಾರ್ಯಕ್ರಮ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಕನಸಿನ ಕೂಸು. ಬಹುಶಃ ಇಂತಹ ಕಾರ್ಯಕ್ರಮ ರಾಜ್ಯದ ಯಾವುದೇ ಜಿಲ್ಲೆಯಲ್ಲಿಯೂ ನಡೆದಿಲ್ಲ. ಪ್ರತಿ ವಿದ್ಯಾರ್ಥಿಯಲ್ಲಿಯೂ ಸುಪ್ತ ಪ್ರತಿಭೆ ಇರುತ್ತದೆ, ಅದನ್ನು ಗುರುತಿಸಿ, ಸ್ಫೂರ್ತಿ ನೀಡಿ, ಬೆಳೆಸುವ ಕೆಲಸ ಶಾಲೆಯಲ್ಲಿ ಶಿಕ್ಷಕರು ಹಾಗೂ ಮನೆಯಲ್ಲಿ ಪೋಷಕರು ತಪ್ಪದೆ ಮಾಡಬೇಕು. ಪ್ರೇರಣೆ, ಸ್ಫೂರ್ತಿ, ಪ್ರೋತ್ಸಾಹ ದೊರೆತರೆ ಸಾಮಾನ್ಯ ವಿದ್ಯಾರ್ಥಿಯೂ ಅಸಾಧ್ಯವಾದುದನ್ನು ಸಾಧಿಸಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲ. ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮದಿಂದಾಗಿ ಕೇವಲ 4 ರಿಂದ 5 ತಿಂಗಳು ಓದಿ, ಪರೀಕ್ಷೆ ಬರೆಯುವ ಸವಾಲು ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಮುಂದಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಸಾಮಥ್ರ್ಯವನ್ನು ಓರೆಗೆ ಹಚ್ಚುವ ಸಮಯ ಇದಾಗಿದೆ. ಯಾರೂ ಕೂಡ ಧೈರ್ಯಗೆಡದೆ, ಛಲದಿಂದ ಸಾಧಿಸಿ, ಯಶಸ್ಸು ಕಾಣುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಯಾಗಿ ಡಾ. ಮಲ್ಲಪ್ಪ, ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಮ್ಮ, ಉಪಾಧ್ಯಕ್ಷ ರವಿಕುಮಾರ್, ಎಸ್‍ಡಿಎಂಸಿ ಅಧ್ಯಕ್ಷ ಕುಬೇರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜು, ಆಹಾರ ಇಲಾಖೆ ಜಂಟಿನಿರ್ದೇಶಕ ಮಂಟೇಸ್ವಾಮಿ, ನ್ಯಾಮತಿ ತಹಸಿಲ್ದಾರ್ ತನುಜಾ, ಮುಂತಾದವರು ಉಪಸ್ಥಿತರಿದ್ದರು.