ದಾವಣಗೆರೆ: ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವಾಗಿ ಎರಡನೇ ಕಂತಿನಲ್ಲಿ ಜಿಲ್ಲೆಯ 69575 ರೈತರಿಗೆ ರೂ.44.35 ಕೋಟಿ ಇನ್ಫುಟ್ ಸಬ್ಸಿಡಿ ಬಿಡುಗಡೆ ಮಾಡಿದ್ದು, ದಾಖಲಾತಿ ಹೊಂದಾಣಿಕೆಯಾಗದ 11,597 ರೈತರಿಗೆ ಪರಿಹಾರ ಬಿಡುಗಡೆ ಮಾಡಲು ಬ್ಯಾಂಕ್ ಖಾತೆಯ ದಾಖಲಾತಿಗಳನ್ನು ಸರಿಪಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊದಲ ಕಂತಿನಲ್ಲಿ ತಲಾ 2 ಸಾವಿರದಂತೆ 82928 ರೈತರಿಗೆ ಹಾಗೂ ಎರಡನೇ ಹಂತದಲ್ಲಿ 69575 ರೈತರಿಗೆ ಒಟ್ಟು ರೂ.60.23 ಕೋಟಿ ಬೆಳೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನೂ 11597 ರೈತರಿಗೆ ಇನ್ಫುಟ್ ಸಬ್ಸಿಡಿ ಬಿಡುಗಡೆ ಮಾಡಬೇಕಾಗಿದ್ದು ಇವರ ಖಾತೆಯ ವಿವರಗಳು ಸರಿಯಾಗಿರದ ಕಾರಣ ಬಿಡುಗಡೆ ಮಾಡಲು ಸಾಧ್ಯವಾಗಿರುವುದಿಲ್ಲ.
ಇದರಲ್ಲಿ 5,575 ರೈತರ ಖಾತೆಗಳಿಗೆ ಆಧಾರ್ ಜೋಡಣೆಯಾಗಿರುವುದಿಲ್ಲ. ಐಎಫ್ಎಸ್ಸಿ ಕೋಡ್ ತಪ್ಪಾಗಿರುವ 3696, ಫ್ರೋಟ್ಸ್ ಮತ್ತು ಆಧಾರ್ಗೆ ಮಿಸ್ ಮ್ಯಾಚ್ ಆಗಿರುವ 1684, ಆಧಾರ್ ಜೋಡಣೆಯಾಗದ 244 ಸೇರಿದಂತೆ ವಿಫಲ ಪಾವತಿ ಸೇರಿದಂತೆ ಇತರೆ ಕಾರಣದಿಂದ ಪಾವತಿ ಮಾಡಲು ಸಾಧ್ಯವಾಗಿರುವುದಿಲ್ಲ.
ಎಲ್ಲಾ ತಾಲ್ಲೂಕುಗಳಲ್ಲಿ ಪರಿಹಾರದ ಬಗ್ಗೆ ಸಹಾಯಕ್ಕಾಗಿ ಸಹಾಯವಾಣಿ ಸ್ಥಾಪಿಸಲಾಗಿದ್ದ ಇಲ್ಲಿಯವರೆಗೆ 1374 ಕರೆಗಳನ್ನು ಸ್ವೀಕರಿಸಲಾಗಿದೆ. ಬ್ಯಾಂಕ್ಗಳಲ್ಲಿ ಪ್ರತ್ಯೇಕವಾಗಿ ಸಹಾಯ ಮೇಜು ಸ್ಥಾಪನೆ ಮಾಡುವ ಮೂಲಕ ಆಧಾರ್ ಸೀಡಿಂಗ್ ಮಾಡುವುದು ಮತ್ತು ಆಧಾರ್ನಂತೆ ಬ್ಯಾಂಕ್ ಖಾತೆಯನ್ನು ತಿದ್ದುಪಡಿ ಮಾಡುವ ಮೂಲಕ ಆದಷ್ಟು ಬೇಗ ರೈತರ ಖಾತೆಗಳಿಗೆ ಪರಿಹಾರ ಜಮಾ ಮಾಡಲು ದಾಖಲೆಗಳನ್ನು ಸರಿಪಡಿಸುವ ಕೆಲಸವನ್ನು ಎಲ್ಲಾ ಬ್ಯಾಂಕ್ಗಳಿಂದಾಗಬೇಕಾಗಿದೆ ಎಂದರು.
ಸಾಲಕ್ಕೆ ಪರಿಹಾರ ಜಮಾ ಮಾಡುವಂತಿಲ್ಲ; ರೈತರು ಬೆಳೆನಷ್ಟ ಅನುಭವಿಸಿದ್ದು ಇವರಿಗೆ ಇನ್ಫುಟ್ ಸಬ್ಸಿಡಿ, ಬೆಳೆ ವಿಮಾ ಪರಿಹಾರ ಹಾಗೂ ಉದ್ಯೋಗ ಖಾತರಿಯಡಿ ಕೂಲಿ ಹಣವನ್ನು ಖಾತೆಗೆ ಜಮಾ ಮಾಡಲಾಗಿದ್ದು ಇದನ್ನು ರೈತರು ಪಡೆದ ಸಾಲಕ್ಕೆ ತೀರುವಳಿ ಮಾಡಬಾರದು. ರೈತರು ಇವರಾರು ಬಿಎಂಡಬ್ಲಿಯೋ ಕಾರ್ ಇಟ್ಟುಕೊಂಡಿಲ್ಲ. ಅವರಿಗೆ ಸಿಗುವ ಹತ್ತಾರು ಸಾವಿರದಲ್ಲಿ ಬೀಜ, ಗೊಬ್ಬರಕ್ಕೆ ಉಪಯೋಗ ಮಾಡಿಕೊಳ್ಳುವರು. ಆದ್ದರಿಂದ ಯಾವುದೇ ಬ್ಯಾಂಕ್ನವರು ಬೆಳೆ ಪರಿಹಾರ, ಖಾತರಿ ಹಣವನ್ನು ಬಾಕಿ ಸಾಲಕ್ಕೆ ಮುರಿದುಕೊಳ್ಳಬಾರದೆಂದು ತಾಕೀತು ಮಾಡಿ ಅಂತಹ ಬ್ಯಾಂಕ್ ಅಧಿಕಾರಿಗಳ ಮೇಲೆ ಸರ್ಕಾರಕ್ಕ ವರದಿ ಮಾಡಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ವಿಶೇಷಚೇತನರಿಗೆ ಬರುವ ಮಾಸಾಶನದ ಹಣವನ್ನು ಅವರ ಸಾಲಕ್ಕೆ ಚುಕ್ತಾ ಮಾಡಿಕೊಳ್ಳಲಾಗುತ್ತಿದೆ ಎಂದು ದೂರುಗಳಿದ್ದು ಸರ್ಕಾರ ಅವರ ಜೀವನ ಮಟ್ಟ ಸುಧಾರಣೆ ಮಾಡಲು ಮಾಸಾಶನ ನೀಡಲಾಗುತ್ತಿದ್ದು ಈ ರೀತಿಯಾಗದಂತೆ ಸೂಕ್ತ ನಿರ್ದೇಶನ ನೀಡಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಲೀಡ್ ಮ್ಯಾನೇಜರ್ ಪ್ರಕಾಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.