ದಾವಣಗೆರೆ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಲೈಸೆನ್ಸ್ ನೀಡುವಾಗ ಮಳೆನೀರು ಕೊಯ್ಲು ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಮಳೆ ನೀರು ಅತ್ಯಂತ ಶುದ್ದವಾಗಿರುತ್ತದೆ. ಮನೆಗಳಲ್ಲಿ ನೀರು ಸಂಗ್ರಹ ಮಾಡುವುದರಿಂದ ಪರಿಸರಕ್ಕೂ ಅನುಕೂಲ, ಜನರಿಗೂ ಅನುಕೂಲವಾಗಲಿದೆ. ಹಾಸ್ಟೆಲ್‍ಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಮಳೆ ನೀರುಕೊಯ್ಲು ಮಾಡಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ನೆಲ-ಜಲ ಹಾಗೂ ಪರಿಸರ ಸಂರಕ್ಷಣೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ನೆಲಜಲ, ಪ್ಲಾಸ್ಟಿಕ್ ಮುಕ್ತ ಪರಿಸರ ಸಂರಕ್ಷಣೆಗಾಗಿ ಸಾರ್ವಜನಿಕರ ಸಹಭಾಗಿತ್ವ ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪುಣೆಯ ಖ್ಯಾತ ಪರಿಸರವಾದಿ ವಿನೋದ್ ಜೋದನ್‍ಕರ್ ರಿಂದ ಜುಲೈ 18 ರಂದು ಮಧ್ಯಾಹ್ನ 3 ಗಂಟೆಗೆ ಎಲ್ಲಾ ಪ್ರೌಢಶಾಲೆ ಮಖ್ಯೋಪಾಧ್ಯಾಯರು ಸೇರಿದಂತೆ ಪಿಡಿಓ, ಗ್ರಾಮ ಆಡಳಿತ ಅಧಿಕಾರಿಗಳು, ರೈತ ಮುಖಂಡರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ವೆಬಿನಾರ್ ಆಯೋಜಿಸಲಾಗಿದೆ ಎಂದರು.
ಭವಿಷ್ಯದ ಹಿತದೃಷ್ಟಿಯಿಂದ ಪರಿಸರ ಸಂರಕ್ಷಣೆ ಮಹತ್ವಪೂರ್ಣವಾಗಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ತಗ್ಗಿಸುವುದು, ಗಿಡ-ಮರ ಬೆಳೆಸುವುದು, ಮಳೆನೀರು ಕೊಯ್ಲು ಮಾಡುವುದು ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ದಾವಣಗೆರೆ ನಗರದಲ್ಲಿ ಮೊದಲ ಹಂತವಾಗಿ ಎಸ್.ಎಸ್.ಬಡವಾಣೆಯ ವಾರ್ಡ್‍ನ್ನು ಮಾದರಿ ವಾರ್ಡ್ ಆಗಿ ಜುಲೈ 19 ರಂದು ಸಂಸದರು ಘೋಷಣೆ ಮಾಡುವರು. ಇಲ್ಲಿ ಪ್ರತಿನಿತ್ಯ ಕಸ ಸಂಗ್ರಹ ಮಾಡುವಾಗ ಹಸಿಕಸ, ಒಣಕಸವನ್ನು ಕಡ್ಡಾಯವಾಗಿ ಬೇರ್ಪಡಿಸುವುದು, ವಾಯು ಮಾಲಿನ್ಯ, ಜಲಮಾಲಿನ್ಯ, ಶಬ್ದ ಮಾಲಿನ್ಯ ಸೇರಿದಂತೆ ದೃಷ್ಟಿ ಮಾಲಿನ್ಯವನ್ನು ತಡೆಗಟ್ಟಲು ಕ್ರಮ ವಹಿಸಲಾಗುತ್ತದೆ. ಎಲ್ಲೆಂದರಲ್ಲಿ ಪ್ಲೆಕ್ಸ್ ಅಳವಡಿಕೆ, ವಾಂಟೆಡ್ ಜಾಹಿರಾತುಗಳನ್ನು ಗೋಡೆಯ ಮೇಲೆ ಅಂಟಿಸಲಾಗಿರುತ್ತದೆ, ಇದನ್ನು ಸಹ ತಡೆಗಟ್ಟಲು ಮಾದರಿ ವಾರ್ಡ್‍ನಲ್ಲಿ ಅನುಷ್ಟಾನ ಮಾಡಲಾಗುತ್ತದೆ ಎಂದರು.
ನಗರ, ಪಟ್ಟಣದ ಜೊತೆಗೆ ಗ್ರಾಮಾಂತರ ಪ್ರದೇಶದಲ್ಲಿಯು ಜನಭಾಗೀದಾರ ಜನಾಂದೋಲನವನ್ನಾಗಿ ಪರಿವರ್ತಿಸಲು ನಾಗರಿಕರ ಹಿತರಕ್ಷಣಾ ಸಮಿತಿಗಳು, ನಾಗರಿಕರು ಮತ್ತು ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳ ಸಹಭಾಗಿತ್ವವನ್ನು ಪಡೆಯಲಾಗುತ್ತದೆ. ಹೆಚ್ಚು ಯುವ ಜನರನ್ನು ಪರಿಸರ ಸಂರಕ್ಷಣೆಯಲ್ಲಿ ಭಾಗೀದಾರರನ್ನಾಗಿ ಮಾಡಲು ಮೊದಲ ಹಂತದಲ್ಲಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ವ್ಯಾಪಕ ಅರಿವು ಮೂಡಿಸಲಾಗುತ್ತದೆ ಎಂದರು.
ಕೆರೆಗಳ ಒತ್ತುವರಿಗೆ ಸೂಚನೆ
ಜಿಲ್ಲೆಯಲ್ಲಿನ ಕೆರೆಗಳ ಒತ್ತುವರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ತಹಶೀಲ್ದಾರರು ಕ್ರಮವಹಿಸಬೇಕು. ದಾವಣಗೆರೆ ತಾಲ್ಲೂಕಿನ ಹೊನ್ನೂರು ಕೆರೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ರೈತ ಮುಖಂಡರು ಒತ್ತಾಯಿಸಿದಾಗ ಕೂಡಲೆ ಒತ್ತುವರಿ ತೆರವಿಗೆ ತಹಶೀಲ್ದಾರರು ಕ್ರಮವಹಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ರೈತ ಮುಖಂಡರಾದ ಬಲ್ಲೂರು ರವಿಕುಮಾರ್, ವಸಂತ, ವಿಶ್ವನಾಥ್, ಬಡಾವಣೆ ನಾಗರಿಕ ಹಿತರಕ್ಷಾ ಸಮಿತಿಯ ಈಶ್ವರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ರೈತ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.