ದಾವಣಗೆರೆ: ಮುಖ್ಯಮಂತ್ರಿಗಳು ಪ್ರತಿ ವಾರಕ್ಕೊಮ್ಮೆ ತಾಲ್ಲೂಕು ಕಚೇರಿಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಲು ಸೂಚಿಸಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಯವರು ಹೊನ್ನಾಳಿ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಸಾರ್ವಜನಿಕರಿಂದ 40ಕ್ಕೂ ಹೆಚ್ಚು ಅಹವಾಲುಗಳನ್ನು ಸ್ವೀಕರಿಸಿ ಕಾಲಮಿತಿಯೊಳಗೆ ಅರ್ಜಿಗಳಿಗೆ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಕಚೇರಿಯ ವಿವಿಧ ಕಡತಗಳನ್ನು ಪರಿಶೀಲಿಸಿದರು. ಜೊತೆಗೆ ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿದರು, ಗ್ರಾಮ ಒನ್ ಕೇಂದ್ರವು ಸ್ಥಳದ ಕೊರತೆಯಿಂದ ಕಿರಾಣಿ ಅಂಗಡಿಯಲ್ಲಿ ನಡೆಯುತ್ತಿದ್ದು, ತಕ್ಷಣವೇ ಅದನ್ನು ಸ್ವತಂತ್ರ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ತಿಳಿಸಿ, ಗ್ರಾಮ ಒನ್ ಕೇಂದ್ರದಲ್ಲಿ ಯಾವುದೇ ರೀತಿಯ ವ್ಯಾಪಾರ ನಡೆಸಬಾರದು. ಕೇವಲ ಗ್ರಾಮ ಒನ್ ಸೇವೆಗಳನ್ನು ಮಾತ್ರ ಒದಗಿಸಬೇಕು ಎಂದು ಸೂಚಿಸಿದರು.