ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರತಿ ದಿನ ಐದು ನೂರರಿಂದ ಸಾವಿರದ ವರೆಗೆ ಬಂದು ನಿಂತಿದೆ. ಹೀಗಾಗಿ ಸಾರ್ವಜನಿಕರು ಮದುವೆ, ಜಾತ್ರೆ, ಉತ್ಸವಗಳನ್ನು ಮುಂದೂಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮನವಿ ಮಾಡಿದ್ದಾರೆ.
ಹಬ್ಬ, ಜಾತ್ರೆ, ಮದುವೆ ಸಮಾರಂಭಗಳಿಂದ ಸೋಂಕು ಹೆಚ್ಚಾಗುತ್ತಿದೆ. ನಾವು ಕೂಡ ಎಷ್ಟು ಅಂತಾ ನಿರ್ಬಂಧ ವಿಧಿಸಲು ಸಾಧ್ಯ. ನೀವೇ ಸ್ವಯಂ ಪ್ರೇರಣೆಯಿಂದ ಹಬ್ಬ, ಜಾತ್ರೆ, ಮದುವೆ ಸಮಾರಂಭಗಳನ್ನು ಮುಂದೂಡಿ. ಮಾತು ಎತ್ತಿದ್ದರೆ, ಎಫ್ ಐ ಆರ್ ಹಾಕಿ ಅಂತೀರಾ.. ಆದರೆ, ವಾಸ್ತವದಲ್ಲಿ ಜನರು ಪ್ರಜ್ಞಾವಂತರಾಗಬೇಕು. ಕೊರೊನಾ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದರು.
ಕೊರೊನಾ ಎರಡು ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಎರಡು ಡೋಸ್ ಹಾಕಿಸಿಕೊಂಡವರು ಬೂಸ್ಟರ್ ಡೋಸ್ ಹಾಕಿಸಿಕೊಳ್ಳಬೇಕು. ಇನ್ನು ಕೂಡ ಒಂದೂ ಡೋಸ್ ಲಸಿಕೆ ಹಾಕಿಸಿಕೊಳ್ಳದವರು ಇದ್ದಾರೆ. ಇಂಥವರಿಗೆ ಕೊರೊನಾ ಬಂದರೆ, ನಿಯಂತ್ರಣ ಮಾಡುವುದು ಕಷ್ಟ. ಹೀಗಾಗಿ ಎಲ್ಲರು ಲಸಿಕೆ ಹಾಕಿಸಿಕೊಳ್ಳಬೇಕು. ಜೊತೆಗೆ ಮಾಸ್ಕ್ ಹಾಕದೇ ಹೊರಗಡೆ ಓಡಾಡಬಾರದು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಈ ಮೂಲಕ ಕೊರೊನಾ ನಿಯಂತ್ರಿಸಲು ಎಲ್ಲರು ಜಿಲ್ಲಾಡಳಿತ ಜೊತೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.



