ದಾವಣಗೆರೆ: ರಾಜ್ಯದಲ್ಲಿ ಇಂದಿನಿಂದ ಕಠಿಣ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿಯೂ ಲಾಕ್ ಡೌನ್ ಗೆ ಜನರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಇಡೀ ಜಿಲ್ಲೆ ಲಾಕ್ ಡೌನ್ ಗೆ ಸ್ತಬ್ಧವಾಗಿದೆ.

ಕಠಿಣ ಲಾಕ್ ಡೌನ್ ನಿಂದ ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಬಿಪಿ ರಸ್ತೆ, ಹದಡಿ ರಸ್ತೆ, ಆವರಗೆರೆ ರಸ್ತೆ, ಹರಹರ ರಸ್ತೆ, ಕೊಂಡಜ್ಜಿ ರಸ್ತೆ ಸೇರಿದಂತೆ ನಗರದ ನಾಲ್ಕು ದಿಕ್ಕಿನಲ್ಲಿಯೂ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ಲಾಕ್ ಮಾಡಿದ್ದರು. ಅನಗತ್ಯವಾಗಿ ಬೈಕ್ ನಲ್ಲಿ ಓಡಾಟ ಮಾಡುವರನ್ನು ಪೊಲೀಸರು ತಡೆದು ವಾಹನ ಸೀಜ್ ಮಾಡುತ್ತಿದ್ದರು. ತುರ್ತು ಸೇವೆ ಹೊರತುಪಡಿಸಿ ಎಲ್ಲ ಸೇವೆಗಳು ಸಂಪೂರ್ಣವಾಗಿ ಬಂದ್ ಆಗಿವೆ.

ಇನ್ನು ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿದ್ದರಿಂದ ನಗರದ ಸಾರ್ವಜನಿಕರು ಅಗತ್ಯ ವಸ್ತು ಖರಿದೀಗೆ ನಡೆದುಕೊಂಡು ಬಂದು, ತಮಗೆ ಬೇಕಾದ ವಸ್ತು ತೆಗೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ಗ್ರಾಮೀಣ ಪ್ರೇಶದಿಂದ ಬಂದವರ ಬೈಕ್ ಸೀಜ್ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಪೊಲೀಸರು ಯಾವುದೇ ಮಾತನಾಡದೇ ವಾಹನ ಸೀಜ್ ಮಾಡಿ, ನಡೆದುಕೊಂಡು ಹೋಗುವಂತೆ ಸೂಚಿಸುತ್ತಿದ್ದರು.

ಇನ್ನು ಮಾರುಕಟ್ಟೆಗಳು ಮುಚ್ಚಿದ್ದವು. ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಸಾಮಾನ್ಯವಾಗಿತ್ತು. ಕೆ.ಆರ್ ಮಾರುಕಟ್ಟೆಯಲ್ಲಿ ಬೆಳಗ್ಗೆ 10 ಗಂಟೆ ವರೆಗೆ ಅಂಗಡಿಗಳು ತೆರೆದಿದ್ದರೂ, ಜನರು ಇಲ್ಲದೇ ಬಿಕೋ ಎನ್ನುತ್ತಿದ್ದವು. ಇನ್ನು ಕೃಷಿ ಪರಿಕರಕ್ಕೆ ಯಾವುದೇ ತೊಂದರೆ ಇಲ್ಲ. ಔಷಧಿ, ಬೀಜ, ಗೊಬ್ಬರ ಅಂಡಿಗಳು ತೆರೆದಿದ್ದವು. ಆದರೆ, ರೈತರು ನಗರ ಪ್ರವೇಶಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಬೆಳಗ್ಗೆ 6 ರಿಂದ 10 ಗಂಟೆ ವರಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ಈ ಸಮಯದಲ್ಲಿ ಜನರು ಅಗತ್ಯ ವಸ್ತು ಖರೀದಿ ಮಾಡಿದರು. 10 ಗಂಟೆ ನಂತರ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು.




