ದಸರಾ, ದೀಪಾವಳಿ, ಈದ್ ಮಿಲಾದ್; ಸಾಮೂಹಿಕ ಪ್ರಾರ್ಥನೆ, ಮೆರವಣಿಗೆಗೆ ಅವಕಾಶವಿಲ್ಲ: ಡಿಸಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ಡಿವಿಜಿ ಸುದ್ದಿ, ದಾವಣಗೆರೆ: ಕೋವಿಡ್ ಮಾರ್ಗಸೂಚಿಗಳನ್ವ ಈ ಬಾರಿ ಹಬ್ಬಗಳನ್ನು ಆಚರಿಸಬೇಕಿದ್ದು,  ಯಾವುದೇ ಕಾರಣಕ್ಕೂ ಸಾಮೂಹಿಕ ಪ್ರಾರ್ಥನೆ, ಮೆರವಣಿಗೆ, ಗುಂಪು ಗುಂಪಾಗಿ ಸೇರಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ದಸರಾ, ದೀಪಾವಳಿ ಮತ್ತು ಈದ್ ಮಿಲಾದ್ ಆಚರಣೆ ಕುರಿತ ನಾಗರೀಕ ಶಾಂತಿ ಸೌಹಾರ್ಧ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬ ಹರಿದಿನಗಳು ಧಾರ್ಮಿಕ ಆಚರಣೆಯಾಗಿದ್ದು, ವೈಯಕ್ತಿಕವಾಗಿ ತಮ್ಮ ಮನೆಗಳಲ್ಲಿಯೇ ಭಕ್ತಿಯಿಂದ ಆಚರಿಸೋಣ ಎಂದು ಕರೆ ನೀಡಿದರು.

ಕೋವಿಡ್ ಮಾರ್ಗಸೂಚಿಯನ್ವಯ ಹಗಲು, ರಾತ್ರಿ ಪ್ರವಚನ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮ, ಸಭೆ, ಸಮಾರಂಭ ಮಾಡದಂತೆ ನಿಷೇಧಿಸಲಾಗಿದೆ. ಒಂದು ವೇಳೆ ಜಿಲ್ಲಾ ಮಟ್ಟದಲ್ಲಿ ಇದಕ್ಕೆ ಅವಕಾಶ ನೀಡಿದರೆ ನಮ್ಮ ಮೇಲೆ ಕ್ರಮ ಜರುಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ನಿಮ್ಮೊಂದಿಗೆ ಇವೆ. ನೀವು ಕೂಡ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ವಿವಿಧ ಸಮಾಜದ ಮುಖಂಡರಿಗೆ ಮನವಿ ಮಾಡಿದರು.

ಕೊರೊನಾ ಆರ್‍ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ಸರ್ಟಿಫಿಕೇಟ್ ಹೊಂದಿದ್ದವರಿಗೆ ಮಾತ್ರ ಸಂಘ ಸಂಸ್ಥೆಗಳಲ್ಲಿ, ದೇವಸ್ಥಾನಗಳಲ್ಲಿ ಒಳಗೆ ಪ್ರವೇಶಿಸಬೇಕಿದೆ. ಇದು  ಆದೇಶವಾಗಿ ಹೊರಡಿಸಲು ಸಾಧ್ಯವಾಗದಿದ್ದರೂ,  ಸಂಘ, ಸಂಸ್ಥೆಗಳಲ್ಲಿ ಈ ಪ್ರಯೋಗ ಮಾಡಿದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಕಡಿಮೆ ಪ್ರಕರಣಗಳು ಬರುತ್ತಿವೆ. ಇದು ಇನ್ನು ಮುಂದೆ ಕಡಿಮೆ ಆಗಲಿದೆ. ಹಾಗಾಗಿ ನಮ್ಮನ್ನು ಏನೂ ಮಾಡದು ಎಂದು ತಿಳಿದುಕೊಂಡಿದ್ದಾರೆ. ಆದರೆ ವಾಸ್ತವ ಸ್ಥಿತಿಯೇ ಬೇರೆ. ನಿತ್ಯ 3 ಸಾವಿರ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ನಿನ್ನೆ 900 ಮಾತ್ರ ಮಾಡಿದ್ದಾರೆ. ಹಾಗಾಗಿ ಕಡಿಮೆ ಪ್ರಕರಣಗಳು ದೃಢಪಟ್ಟಿವೆಯೇ ಹೊರತು ಕಡಿಮೆಯಾಗಿಲ್ಲ ಎಂದರು.

ಕಡಿಮೆ ಪ್ರಕರಣಗಳು ದೃಢಪಟ್ಟಾಕ್ಷಣ ಕೊರೊನಾ ಕಡಿಮೆಯಾಗುತ್ತಿದೆ ಎಂದು ಮೈ ಮರೆಯದೇ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕಿದೆ. ಪರೀಕ್ಷೆಗಾಗಿ 31 ಮೊಬೈಲ್ ತಂಡಗಳನ್ನು ಹಾಗೂ 23 ಸ್ಥಿರ ತಂಡಗಳನ್ನು ಗಂಟಲು ದ್ರವ ಸಂಗ್ರಹಕ್ಕೆ ನಿಯೋಜನೆ ಮಾಡಲಾಗಿದೆ. ಆದರೂ ಜನ ಪರೀಕ್ಷೆ ಮಾಡಿಸಲು ಮುಂದೆ ಬರುತ್ತಿಲ್ಲ. ಕೆಲವರು ನಮಗೆ ಏನೂ ಆಗಿಲ್ಲ ಎಂದು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಮುಚ್ಚಿಟ್ಟರೆ ಅದು ನಮ್ಮನ್ನು ಬಿಡುವುದಿಲ್ಲ. ತನ್ನೊಂದಿಗೆ ಕರೆದೊಯ್ಯುತ್ತದೆ. ಆದ್ದರಿಂದ ಪರೀಕ್ಷಾ ತಂಡಗಳಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಸರ್ಕಾರ ಹಬ್ಬಗಳ ಆಚರಣೆ ಕುರಿತಂತೆ ನಿರ್ದೇಶನಗಳನ್ನು ನೀಡಿದೆ. ಅದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕು. ಕೋವಿಡ್ ನಿಯಂತ್ರಣ ನಮ್ಮ ಕರ್ತವ್ಯ . ಅಕೋಬರ್ 31 ರೊಳಗೆ ಅರ್ಜಿ ಸಲ್ಲಿಸುವವರಿಗೆ ಮಾತ್ರ ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಪಟಾಕಿ ಅಂಗಡಿ ತೆರೆಯಲು ಅನುಮತಿ ನೀಡಲಾಗುವುದು. ಇದಕ್ಕೆ ನವೆಂಬರ್ 10 ರಿಂದ 17 ರ ತನಕ ಪರವಾನಿಗೆ ನೀಡಲಾಗುವುದು. ಅರ್ಜಿಗಳನ್ನು ಆಧರಿಸಿ ಅದರ ಆಧಾರದ ಮೇಲೆ ಜಾಗ ನೀಡಲಾಗುವುದು ಎಂದರು.

dasara meeting 2

ದುರ್ಗಾಂಬಿಕಾ ದೇವಿ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಸಾಂಪ್ರಾದಾಯಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿ ಸರಳ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈದ್ ಮಿಲಾದ್ ಕಮಿಟಿ ಕಾರ್ಯದರ್ಶಿ ಯಾಸೀನ್ ಪೀರ್ ತಾಜ್ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯವೇ ಹಬ್ಬ ಆಚರಿಸಲು ಸಮಾಜದ ಬಾಂಧವರು ಮುಂದಾಗಿದ್ದು, ಈ ಸಂಬಂಧ ಸಮಿತಿಯಲ್ಲಿ ತೀರ್ಮಾನಿಸಲಾಗುವುದು ಎಂದರು.

ಪಾಲಿಕೆ ಸದಸ್ಯರಾದ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಶಿವಪ್ರಕಾಶ್, ಚಮನ್ ಸಾಬ್, ಶಿರಾಜ್ ಅಹಮದ್, ಹಿಂದೂಪರ ಸಂಘಟನೆಯ ಸತೀಶ್ ಪೂಜಾರ್ ಮಾತನಾಡಿ, ಸರ್ಕಾರದ ಮಾರ್ಗಸೂಚಿಯನ್ನು ಎಲ್ಲರೂ ಒಪ್ಪಿಕೊಂಡು ಮನೆಗಳಲ್ಲಿಯೇ ಸರಳವಾಗಿ ಹಬ್ಬಗಳನ್ನು ಆಚರಿಸಲಾಗುವುದು ಎಂದರು.

ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ರಾಜೀವ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *