ದಾವಣಗೆರೆ: ಸಿರಿಗೆರೆ ತರಳಬಾಳು ಬೃಹನ್ಮಠ ಮತ್ತು ಶಾಖಾ ಮಠ ಸಾಣೇಹಳ್ಳಿಯ ಮಠಕ್ಕೆ ನೂತರ ಉತ್ತರಾಧಿಕಾರಿ ನೇಮಕ ಮಾಡಲು ಇಂದು (ಆ.04) ನಡೆದ ಸಾದರ ಲಿಂಗಾಯತ ಒಕ್ಕೂಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಬಗ್ಗೆ ಆ. 18ರಂದು ತರಳಬಾಳು ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶ್ರೀಗಳನ್ನು ಭೇಟಿ ಮಾಡಿ ಮನವಿ ಮಾಡಲು ತೀರ್ಮಾನಿಸಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರ ಅಧ್ಯಕ್ಷತೆಯಲ್ಲಿ ದಾವಣಗೆರೆ ಹೊರ ವಲಯದ ಖಾಸಗಿ ಹೋಟೆಲ್ ನಲ್ಲಿ ತರಳಬಾಳು ಪೀಠ ಅಂದು ಇಂದು ಮುಂದು ಎಂಬ ವಾಕ್ಯದಡಿ ಶ್ರೀಮಠದ ಸದ್ಭಕ್ತರ , ಸಾದರ ಲಿಂಗಾಯತ ಒಕ್ಕೂಟದ ಸಮಾಲೋಚನಾ ಸಭೆಯಲ್ಲಿ ಚರ್ಚಿಸಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.
ಈ ಹಿಂದಿನ ಶ್ರೀಗಳು ವಿಲ್ ಮಾಡಿರುವಂತೆ ಹಾಗೂ ಬೈಲಾ ಪ್ರಕಾರ ಬದಲಾವಣೆ ಮಾಡಿ, ಎರಡು ಪೀಠಕ್ಕೆ ನೂತನ ಪೀಠಾಧಿಪತಿಗಳ ನೇಮಕ ಆಗಬೇಕು. 60 ವರ್ಷ ದಾಟಿದ ಬಳಿಕ ಪೀಠಾಧಿಪತಿ ಸ್ಥಾನ ತ್ಯಾಗ ನಿರ್ಣಯಕ್ಕೆ ಇಬ್ಬರೂ ಶ್ರೀಗಳು ಬದ್ಧರಾಗಬೇಕು ಎಂದು ಸಾದರ ಲಿಂಗಾಯತ ಸಮಾಜದ ಮುಖಂಡರು ಆಗ್ರಹಿಸಿದರು.
ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮತ್ತು ಶಾಖಾ ಮಠ ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ 60 ವರ್ಷ ದಾಟಿದೆ. ಬೈಲಾ ತಿದ್ದುಪಡಿ ಆಗಿದ್ದು, ಟ್ರಸ್ಟ್ ಟ್ರಸ್ಟಿಗಳು ಉತ್ತಮ ಕೆಲಸ ಮಾಡುತ್ತಿಲ್ಲ. ಏಕವ್ಯಕ್ತಿ ದೀಡ್ ರದ್ದಾಗಲೇಬೇಕ. ಈ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರು ಹಾಗೂ ಟ್ರಸ್ಟಿಗಳ ನೇಮಕ ಆಗಬೇಕು. ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರು ಬರೆದಿರುವ ವಿಲ್ ಹಾಗೂ ಅವರು ಇದ್ದಾಗ ಮಾಡಿದ್ದ ಬೈಲಾ ಯಥವಾತ್ತಾಗಿ ಜಾರಿಯಾಗಲೇಬೇಕಿದೆ ಒತ್ತಾಯಿಸಿದರು.
ಶಾಮನೂರು ಶಿವಶಂಕರಪ್ಪ ಮಾತನಾಡಿ, ಸಿರಿಗೆರೆ ಶ್ರೀಗಳು ಪೀಠ ತ್ಯಾಗ ಬಗ್ಗೆ ಈ ಹಿಂದೆ ಅವರೇ ಪ್ರಸ್ತಾಪ ಮಾಡಿದ್ದರು. ಅಲ್ಲಿಂದ ಇಲ್ಲಿವರೆಗೆ ಭಕ್ತರರೇ ಉತ್ತರಾಧಿಕಾರಿ ನೇಮಕ ಬಗ್ಗೆ ಇದುವರೆಗೆ ಮನವಿ ಮಾಡಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಆಗಸ್ಟ್ 18ರಂದು ಸಿರಿಗೆರೆ ಶ್ರೀಗಳನ್ನು ಭೇಟಿ ಮಾಡಿ ಒಕ್ಕೂಟ ತೆಗೆದುಕೊಂಡ ನಿರ್ಣಯ ತಿಳಿಸೋಣ. ಡೀಡ್ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಈಗ ವಿಚಾರ ಬೆಳಕಿಗೆ ಬಂದಿದ್ದು, ಕೋರ್ಟ್ ನಲ್ಲಿ ಈ ವಿಷಯ ಇದೆ . ಏಕವ್ಯಕ್ತಿ ಡೀಡ್ ರದ್ದುಪಡಿಸಿ ನೂತನ ಪೀಠಾಧಿಪತಿಗಳನ್ನು ನೇಮಿಸಿ ಎಂದು ಮನವಿ ಮಾಡೋಣ ಎಂದು ತಿಳಿಸಿದರು.ಈ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಶ್ರೀಗಳು ಬದ್ಧರಾದರೆ ಸರಿ, ಇಲ್ಲದಿದ್ದರೆ ಒಕ್ಕೂಟದ ಮುಂದಿನ ನಡೆ ಏನಾಗಿರಬೇಕು ಎಂಬ ಕುರಿತು ಮತ್ತೊಮ್ಮೆ ಸಮಾಲೋಚನೆ ನಡೆಸೋಣ ಎಂದು ತಿಳಿಸಿದರು.
ಮಠಕ್ಕೆ ಭಕ್ತರು ದೇಣಿಗೆ ರೂಪದಲ್ಲಿ ಕೋಟ್ಯಂತರ ರೂಪಾಯಿ ನೀಡಿದ್ದಾರೆ. ಭಕ್ತರ ಕಾಣಿಕೆ ರೂಪದಲ್ಲಿ ಬಂದಿದ್ದು, ಒಬ್ಬ ವ್ಯಕ್ತಿಯ ಹೆಸರಲ್ಲಿದ್ದರೆ ಯಾರು ಒಪ್ಪಲು ಸಾಧ್ಯವಿಲ್ಲ. ಈ ವಿಚಾರ ದೊಡ್ಡದು ಮಾಡದೆ, ಶಾಂತಿಯುತವಾಗಿ ಚರ್ಚಿಸಿ ಬಗೆಹರಿಕೊಳ್ಳೋಣ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಮಾಜಿ ಸಚಿವ ಬಿಸಿ ಪಾಟೀಲ್ ಮಾತನಾಡಿ, ಮಠದಲ್ಲಿ ನಡೆಯುತ್ತಿರುವ ವ್ಯವಹಾರದ ಬಗ್ಗೆ ಧ್ವನಿ ಎತ್ತದಿದ್ದರೇ ಮಠ ಹಾಳಾಗಿ ಹೋಗುತ್ತದೆ. ಸಿರಿಗೆರೆ ಮಠ ಶಿಸ್ತಿಗೆ ಹೆಸರಾಗಿತ್ತು. ಈಗ ಬೇರೆಯವರು ನಮಗೆ ಬಂದು ಬುದ್ದಿ ಹೇಳುವ ಸ್ಥಿತಿ ಬಂದಿದೆ. ನಾನು ಈ ಹಿಂದೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದಾಗ ಸಾಣಿಹಳ್ಳಿ ಮಠದ ಕಾರ್ಯಕ್ರಮಕ್ಕೆ ಹೋಗಿದ್ದೆ. ಸಾಣಿಹಳ್ಳಿ ಮಠದ ಕಾರ್ಯಕ್ರಮಕ್ಕೆ ಹೋಗಿದ್ದೇ ತಪ್ಪಾಯಿತು. ಸಿರಿಗೆರೆ ಸ್ವಾಮೀಜಿ ನಮ್ಮ ಯಾವುದೇ ಕಾರ್ಯಕ್ರಮಕ್ಕೆ ಕರೆದಿಲ್ಲ. ಮಠಕ್ಕೆ ನೂತನ ಪೀಠಾಧಿಪತಿ ಆಗಬೇಕು. ಸಂಘದ ಬೈಲಾ ತಿದ್ದುಪಡಿ ಸರಿ ಮಾಡಬೇಕು. ಇದಕ್ಕೆ ನಾನು ಹೋರಾಟ ಮಾಡಲು ಸಿದ್ದ ಎಂದು ಹೇಳಿದ್ದಾರೆ.
ಸಭೆಯಲ್ಲಿ, ಮಾಜಿ ಸಚಿವ ಎಸ್ ಎ. ರವೀಂದ್ರನಾಥ್, ಸಮಾಜದ ಮುಖಂಡರಾದ ಅಣಬೇರು ರಾಜಣ್ಣ, ಹೆಚ್. ಎನ್. ಶೇಖರಪ್ಪ, ಮಹೇಶ ಪಲ್ಲಾಗಟ್ಟೆ, ಚೇತನ ಎಲೇಬೇತೂರು, ಹರಿಹರ ಶಾಸಕ ಬಿ.ಪಿ.ಹರೀಶ್, ಎಂಎಲ್‌ಸಿ ರುದ್ರಗೌಡ, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಟಿ.ಗುರುಸಿದ್ದನಗೌಡ, ಮಾಡಾಳ್ ಮಲ್ಲಿಕಾರ್ಜುನ್ ಸೇರಿ ಮತ್ತಿತರರು ಇದ್ದರು.